ಶನಿವಾರಸಂತೆ, ಡಿ. ೧೭: ವಿದ್ಯಾಸಂಸ್ಥೆಗಳನ್ನು ಉತ್ತಮವಾಗಿ ನಡೆಸುವುದು ಆಡಳಿತ ಮಂಡಳಿಯ ಮಹತ್ತರ ಜವಾಬ್ದಾರಿಯಾಗಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಶಿಕ್ಷಕರ ಜತೆ ಸೌಹಾರ್ದತೆಯೊಂದಿಗೆ ಇರಬೇಕು ಎಂದು ಶನಿವಾರಸಂತೆ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಬಾಪೂಜಿ ವಿದ್ಯಾಸಂಸ್ಥೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ “ಬಾಪೂಜಿ ಪರ್ವ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಪೂಜಿ ವಿದ್ಯಾಸಂಸ್ಥೆ ಶನಿವಾರಸಂತೆಯ ಪ್ರಥಮ ಖಾಸಗಿ ವಿದ್ಯಾಸಂಸ್ಥೆಯಾಗಿದ್ದು ಇತರೆ ೧೮ ಶಾಲೆಗಳಿಗೆ ಪೈಪೋಟಿ ನೀಡುತ್ತಾ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ವಿದ್ಯಾಸಂಸ್ಥೆಯ ವಾರ್ಷಿಕ ಸಾಧನೆಯ ಸಂಕೇತವೇ ವಾರ್ಷಿಕೋತ್ಸವ. ಮಕ್ಕಳಿಗೆ ಹಬ್ಬವಾಗಿರುವ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ, ಪ್ರತಿಭಾ ಪ್ರದರ್ಶನಕ್ಕೆ ಹಾಗೂ ಶಾಲಾ ಸಂಸ್ಕೃತಿಯ ಪೋಷಣೆಯಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಅತ್ಯಂತ ಮಹತ್ವದ ವೇದಿಕೆಯಾಗಿದೆ. ವಿದ್ಯಾಸಂಸ್ಥೆಗಳು ಶೈಕ್ಷಣಿಕ ಪ್ರಗತಿ ಸಾಧನೆಯಲ್ಲಿ ಮಾತ್ರ ಪೈಪೋಟಿ ತೋರಿಸಬೇಕು ಎಂದರು. ನಿವೃತ್ತ ಮುಖ್ಯ ಶಿಕ್ಷಕಿ ರುಕ್ಮಿಣಿ ಮಾತನಾಡಿ, ಹಿಂದಿನ ಕಾಲದ ವಿದ್ಯಾಭ್ಯಾಸಕ್ಕೂ ಇಂದಿನ ಕಾಲದ ವಿದ್ಯಾಭ್ಯಾಸಕ್ಕೂ ಅಗಾಧ ವ್ಯತ್ಯಾಸವಿದೆ. ಗುರು-ಶಿಷ್ಯರ ಸಂಬAಧ ಚೆನ್ನಾಗಿದ್ದರೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸುತ್ತಾರೆ ಎಂದರು. ನಿಡ್ತ ಗ್ರಾಮ ಲೆಕ್ಕಾಧಿಕಾರಿ ಅಬ್ದುಲ್ ರಝಾಕ್ ಮಾತನಾಡಿ, ವಿದ್ಯಾರ್ಥಿಯ ಭವಿಷ್ಯ ರೂಪಿಸುವ ರೂವಾರಿ ಶಿಕ್ಷಕ. ವಿದ್ಯೆಯಿಂದ ವಿದ್ಯಾರ್ಥಿ ಸಮಾಜದಲ್ಲಿ ಸ್ಥಾನ-ಮಾನ ಗಳಿಸುತ್ತಾನೆ. ವಿದ್ಯಾರ್ಥಿ ಸದೃಢನಾಗಲು ಉತ್ತಮ ಸಂಸ್ಕಾರ ಮುಖ್ಯ ಎಂದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿಗುರು, ಸಮಾಜ ಸೇವಕ ರಕ್ಷಿತ್, ಕಾಫಿ ಬೆಳೆಗಾರರಾದ ದೊಡ್ಡಪ್ಪ, ಕುಮಾರ್ ಹಾಗೂ ಬೆಸೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಮುರಳೀಧರ್ ಮಾತನಾಡಿದರು. ಈ ಸಂದರ್ಭ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾಕೂಟದಲ್ಲಿ ವಿಜೇತ ಪೋಷಕರಿಗೆ ಬಹುಮಾನಗಳನ್ನು ಅತಿಥಿ ಗಣ್ಯರು ವಿತರಿಸಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಲಿಂಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಗಾಂಧೀಜಿ, ಅಬ್ದುಲ್ ಕಲಾಂ ರಂತಹ ಆದರ್ಶ ವ್ಯಕ್ತಿಗಳ ಮೌಲ್ಯಯುತ ಬದುಕನ್ನು ಆದರ್ಶವಾಗಿಸಿಕೊಳ್ಳಬೇಕು ಎಂದರು.

ದಾನಿಗಳಾದ ಕಲಮ್ಮ, ಎಂ.ಎ. ಚಂದ್ರಶೇಖರ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎನ್. ಮನೋಹರ್, ಖಜಾಂಚಿ ಟಿ.ಎಸ್. ಮಲ್ಲೇಶಪ್ಪ, ಮಾಜಿ ಅಧ್ಯಕ್ಷೆ ಇಂದಿರಾ, ನಿರ್ದೇಶಕರು, ಮುಖ್ಯ ಶಿಕ್ಷಕ ಎಂ.ಎಸ್. ಉಲ್ಲಾಸ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ನಿಶಾ ಸ್ವಾಗತಿಸಿ, ಶ್ರುತಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಜುರಾಬಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.