ಸೋಮವಾರಪೇಟೆ, ಡಿ. ೧೮: ಜಿಲ್ಲೆಯಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ವಿಧಾನ ಸಭೆಯಲ್ಲಿ ಆಗ್ರಹಿಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸಿರುವ ಶಾಸಕ ಡಾ. ಮಂತರ್ ಗೌಡ ಅವರು, ರಾಜ್ಯ ಸರ್ಕಾರದ ಗೃಹ ಸಚಿವರ ಉಪಸ್ಥಿತಿಯಿದ್ದ ಸದನದಲ್ಲಿ, ಕೊಡಗಿನ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರು.
ಉತ್ತರ ಭಾರದಿಂದ ಸಾವಿರಾರು ಮಂದಿ ಕೂಲಿ ಕಾರ್ಮಿಕರು ಕೊಡಗು ಜಿಲ್ಲೆಗೆ ಬಂದಿದ್ದಾರೆ. ಇವರ ಪೈಕಿ ಕೆಲವರು ಅಸ್ಸಾಂ, ಕೆಲವರು ಬಿಹಾರ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಬಾಂಗ್ಲಾದಿAದ ಬರುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಹಲವಷ್ಟು ಮಂದಿಗೆ ಮೂಲ ದಾಖಲಾತಿಗಳು ಇಲ್ಲದಿರುವ ಬಗ್ಗೆ ತಿಳಿದುಬರುತ್ತಿದೆ. ಇನ್ನು ಕೆಲವರು ಆಧಾರ್ ಕಾರ್ಡ್ಗಳನ್ನು ಹೊಂದಿದ್ದಾರೆ ಎಂದು ಸದನದ ಗಮನ ಸೆಳೆದರು.
ಮುಂದುವರೆದು ಮಾತನಾಡಿದ ಶಾಸಕರು, ನಮ್ಮ ತೋಟದಲ್ಲೂ ೨೦ ರಿಂದ ೩೦ ಮಂದಿ ಅಸ್ಸಾಂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಇದೆ. ವಲಸಿಗರ ಮೂಲವನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ. ಕಳೆದ ೨೦೨೪ರಲ್ಲಿ ಜಿಲ್ಲೆಯಲ್ಲಿ ವಲಸಿಗರಿಂದ ೨೧ ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು, ಪೊಲೀಸ್ ಮೊಕದ್ದಮೆ ದಾಖಲಾಗಿದೆ. ೨೦೨೫ ರ ಪ್ರಸಕ್ತ ವರ್ಷ ೬೨ ಪ್ರಕರಣಗಳು ದಾಖಲಾಗಿವೆ. ಹಲವಾರು ಕ್ರಿಮಿನಲ್ ಚಟುವಟಿಕೆಗಳು ಇಂತಹವರಿAದ ನಡೆ ಯುತ್ತಿವೆ. ಹಣಕಾಸಿನ ಅವ್ಯವಹಾರ, ಮನೆ ಕಳ್ಳತನ, ಡ್ರಗ್ಸ್, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇವರುಗಳ ಮೂಲ ಪತ್ತೆಗೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಗೃಹ ಇಲಾಖೆ ಯಾವ ಕ್ರಮ ಕೈಗೊಂಡಿದೆ? ಇದರೊಂದಿಗೆ ಕಾರ್ಮಿಕ ಇಲಾಖೆ ಯಾವ ಕ್ರಮಕ್ಕೆ ಮುಂದಾಗಿದೆ ಎಂದು ಪ್ರಶ್ನಿಸಿದರು.
ಶಾಸಕರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್, ಕೊಡಗು ಮಾತ್ರವಲ್ಲದೇ ಚಿಕ್ಕಮಗಳೂರು, ಹಾಸನದಲ್ಲಿಯೂ ಅಕ್ರಮ ವಲಸಿಗರ ಬಗ್ಗೆ ಗಂಭೀರವಾಗಿ ಪ್ರಶ್ನೆ ಎದ್ದಿದೆ. ಕಾರ್ಮಿಕರು ತಾವು ಅಸ್ಸಾಂ ಎಂದು ಹೇಳುತ್ತಾರೆ. ಆದರೆ ಕೆಲವರು ಬಾಂಗ್ಲಾದಿAದ ಬಂದಿದ್ದಾರೆ. ತಾನು ಹಲವು ಬಾರಿ ಬಾಂಗ್ಲಾದಿAದ ಬಂದವರ ಬಗ್ಗೆ ಉತ್ತರ ಕೊಟ್ಟಿದ್ದೇನೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಯಾರೆಂಬುದೇ ಮಾಲೀಕರಿಗೆ ಗೊತ್ತಿರುವುದಿಲ್ಲ. ಯಾವುದೋ ಏಜೆನ್ಸಿಯವರು ಕರೆದುಕೊಂಡು ಬಂದು ತೋಟಕ್ಕೆ ಸೇರಿಸುತ್ತಾರೆ ಎಂದು ಉತ್ತರಿಸಿದರು.
ಮುಂದುವರೆದ ಅವರು, ಇಂತಹ ಕಾರ್ಮಿಕರಲ್ಲಿ ಕೆಲವರು ಮೂಲ ಬಾಂಗ್ಲಾದವರಾಗಿದ್ದರೂ ಕೂಡ ಇಲ್ಲಿಗೆ ಬಂದ ನಂತರ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳುತ್ತಿದ್ದಾರೆ. ಒಬ್ಬ ಭಾರತೀಯನ ಪೌರತ್ವಕ್ಕೆ ಯಾವ ದಾಖಲೆಗಳು ಬೇಕೋ ಅವುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಂತಹವರನ್ನು ಹಿಡಿಯೋದು ಕಷ್ಟ ಆಗುತ್ತದೆ ಎಂದು; ಒಂದರ್ಥದಲ್ಲಿ ಅಸಹಾಯಕತೆಯ ಉತ್ತರ ನೀಡಿದರು.
ಹೊರಭಾಗದಿಂದ ಬಂದಿರುವ ಕಾರ್ಮಿಕರು ಸ್ಥಳೀಯವಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲೂ ತೊಡಗುತ್ತಿದ್ದಾರೆ. ಡ್ರಗ್ಸ್ ಪ್ರಕರಣ ದಲ್ಲಿಯೂ ಭಾಗಿಯಾಗುತ್ತಿದ್ದಾರೆ ಎಂದ ಗೃಹ ಸಚಿವರು, ಆದರೂ ಸಹ ಎಸ್ಟೇಟ್, ರೆಸಾರ್ಟ್, ಹೋಂ ಸ್ಟೇ ನಡೆಸುವ ಮಾಲೀಕರಿಗೆ ಪೊಲೀಸ್ ಇಲಾಖೆಯ ಮೂಲಕ ಸೂಚನೆ ಕೊಟ್ಟಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಅಕ್ರಮ ವಲಸಿಗರ ಬಗ್ಗೆ ನಿಗಾ ವಹಿಸಲು,
೪ಐದನೇ ಪುಟಕ್ಕೆ
ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆಯಲು ಇಲಾಖೆಗೆ ಸೂಚನೆ ನೀಡಲಾಗಿದೆ. ಅಕ್ರಮ ತಡೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ನಮ್ಮ ದೇಶಕ್ಕೆ ಅನ್ಯಾಯವಾಗುವ ಸಂದರ್ಭಗಳನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂಗನವಾಡಿಗೆ ಸೇರ್ಪಡೆಗೊಂಡಿದ್ದ ವಲಸೆ ಕಾರ್ಮಿಕರ ಮಕ್ಕಳು ಭಾಗಿಯಾಗಿದ್ದರು. ರಾಷ್ಟçಗೀತೆ ಹಾಡುವ ಸಂದರ್ಭ ಹಲವಷ್ಟು ಮಕ್ಕಳಿಗೆ ರಾಷ್ಟçಗೀತೆಯೇ ಬರುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ತಕ್ಷಣ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ಗಡಿಗಳನ್ನು ಭದ್ರವಾಗಿಸಲು, ಅಕ್ರಮ ನುಸುಳುಕೋರರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯಬೇಕೆಂದು ಕಾಳಜಿ ತೋರಿದರು.