ಶನಿವಾರಸಂತೆ, ಡಿ. ೧೯: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಇತ್ತೀಚೆಗೆ ನಡೆದ ಕಾರ್ ಹಾಗೂ ಬೈಕ್ ಅಪಘಾತ ಸ್ಥಳವನ್ನು ಶನಿವಾರಸಂತೆ ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕ ಕೃಷ್ಣರಾಜ್ ವೀಕ್ಷಣೆ ಮಾಡಿ ಪರಿಶೀಲಿಸಿದರು.
ಅಲ್ಲಿನ ಸಾರ್ವಜನಿಕರ ಜತೆ ಚರ್ಚಿಸಿ ಘಟನೆ ಮರುಕಳಿಸದಂತೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮ, ಆ ವೃತ್ತದಲ್ಲಿ ಯಾವ ರೀತಿಯಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ನಂತರ ಅವರು, ವಾಹನ ಸಂಚಾರದ ನಿಯಮಗಳ ಬಗ್ಗೆ ಮಾಹಿತಿ ನೀಡಿ, ವಾಹನ ಸಂಚಾರದ ಬಗ್ಗೆ ಸೂಚನಾ ಫಲಕ ಅಳವಡಿಸುವುದಾಗಿ ತಿಳಿಸಿದರು. ಆ ವೃತ್ತದಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸಿದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಪೊಲೀಸ್ ಸಿಬ್ಬಂದಿ ಹರ್ಷ, ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಇದ್ದರು.