*ಗೋಣಿಕೊಪ್ಪ, ಡಿ. ೧೯: ಕೃಷಿ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಗದ್ದೆಗಳು ಪಾಳು ಬೀಳುತ್ತಿವೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ರೈತರ ಸಮಸ್ಯೆಗಳನ್ನು ಹಾಗೂ ರೈತರ ಬೆಳೆ ನಷ್ಟ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿ ಕಂದಾಯ, ತೋಟಗಾರಿಕೆ, ಕೃಷಿ, ಮತ್ತು ಸರ್ವೆ, ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಅಭಿಪ್ರಾಯವನ್ನು ಹಂಚಿಕೊAಡರು.

ಅಧಿಕಾರಿಗಳ ಅಧ್ಯಯನಶೀಲವಿಲ್ಲದೆ ಸರಕಾರಕ್ಕೆ ಸಲ್ಲಿಸುವ ವರದಿಗಳು ಕೊಡಗಿನ ಕೃಷಿ ಪದ್ಧತಿಗೆ ಮಾರಕವಾಗುತ್ತಿವೆ. ಸರಿಯಾದ ಕ್ರಮದಲ್ಲಿ ಬೆಳೆಗಳ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಕಾರಣಗಳೇ ಜಿಲ್ಲೆಯಲ್ಲಿ ಭತ್ತ ಬೆಳೆಯುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಸಭೆಯ ಗಮನಕ್ಕೆ ತಂದರು.

ವಿತರಣೆಯಾಗುವ ಭತ್ತದ ಬೀಜಗಳಲ್ಲಿಯೂ ಗುಣಮಟ್ಟ ಇಲ್ಲದೆ ಇರುವುದರಿಂದ ರೈತ ನಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಕೃಷಿ ಅಧಿಕಾರಿ ದೊರೆರಾಜ ಅವರಲ್ಲಿ ಪ್ರಶ್ನೆಗಳ ಸುರಿಮಳೆಗೈದರು.

ಕೃಷಿ ಬಗ್ಗೆ ಮಾಹಿತಿ ಇಲ್ಲದವರು ಹೇಗೆ ಅಧಿಕಾರಿಯಾದಿರಿ ಎಂದು ಮನುಸೋಮಯ್ಯ ಅಧಿಕಾರಿಯನ್ನು ಪ್ರಶ್ನಿಸಿದರು. ಬೆಳೆ ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಡಿಕೆ, ಭತ್ತ,ಕಾಫಿ, ಕಾಳು ಮೆಣಸು ಬೆಳೆಗಳ ನಷ್ಟ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಸಿಗಬೇಕಾದ ನಷ್ಟ ಪರಿಹಾರಕ್ಕೆ ವ್ಯವಸ್ಥಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸದೆ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿ ಕಾಲ ಕಳೆಯುತ್ತಾರೆ. ಹೀಗಾಗಿ, ನಷ್ಟ ಪರಿಹಾರಗಳು ರೈತರಿಗೆ ದೊರಕುತ್ತಿಲ್ಲ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತರಿಗೆ ಪ್ರೋತ್ಸಾಹ ಎಂಬ ನೆಪದಲ್ಲಿ ಕಳಪೆ ಭತ್ತದ ಬೀಜ ವಿತರಣೆಯಾಗುತ್ತಿದೆ. ಇದು ರೈತರಿಗೆ ತುಂಬಲಾರಾದ ನಷ್ಟವಾಗುತ್ತಿದೆ. ಅಡಿಕೆಗೆ ತೀವ್ರ ಕೊಳೆ ರೋಗದಿಂದ ಈ ಬಾರಿ ಬಹು ನಷ್ಟ ಉಂಟಾಗಿದೆ. ಈ ವಿಚಾರವಾಗಿ ತೋಟಗಾರಿಕೆ ಇಲಾಖೆ ಸೂಕ್ತ ಸರ್ವೆ ನಡೆಸಿ ಪರಿಹಾರ ಒದಗಿಸಬೇಕು. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ ಇದರಿಂದ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ, ಸರ್ವೆ ಇಲಾಖೆಯಲ್ಲಿಯೂ ರೈತರ ಅರ್ಜಿಗಳು ಶೀಘ್ರವಾಗಿ ವಿಲೇವಾರಿಗೊಳ್ಳುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ರೈತರಿಗೆ ನೇರವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತರಾಗಿರಬೇಕು ಎಂದು ರೈತರು ಸಲಹೆ ನೀಡಿದರು.

ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ, ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಒದಗಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಇಲಾಖೆಯಲ್ಲಿ ಬದಲಾವಣೆಯ ಪರ್ವ ಆರಂಭಿಸಲಾಗುವುದು ಎಂಬ ಭರವಸೆ ನೀಡಿದರು.

ಕೃಷಿ ಇಲಾಖೆ ತಾಲೂಕು ಅಧಿಕಾರಿ ದೊರೆರಾಜ ಮಾತನಾಡಿ, ಭತ್ತ ಬೆಳೆಯಲ್ಲಿ ವರ್ಷದಲ್ಲಿ ಯಾವುದೇ ಹಾನಿ ಉಂಟಾಗಲಿಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಜಂಟಿ ನಿzðೆÃಶಕಿ ದೀನಾ ಮಾಹಿತಿ ನೀಡಿ, ತಾಲೂಕಿನಲ್ಲಿ ೨೦ ಶೇಕಡವಾರು ನಷ್ಟ ಪರಿಹಾರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವಿಚಾರವಾಗಿ ಜಂಟಿ ಸರ್ವೆ ನಡೆಸಲಾಗಿದೆ ಎಂದು ತಿಳಿಸಿದರು. ಸರ್ವೆ ಇಲಾಖೆ ಅಧಿಕಾರಿ ಬಾನಂಡ ಅರುಣ ಮಾತನಾಡಿ, ರೈತರಿಗೆ ಸಂಬAಧಿಸಿದ ಎಲ್ಲಾ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಭರವಸೆಯನ್ನು ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಚಿ ಇಟ್ಟೀರ ಸಬಿತಾ ಭೀಮಯ್ಯ, ಕಾನೂನು ಸಲಹೆಗಾರ ಹೇಮಚಂದ್ರ, ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಅಜ್ಜಮಾಡ ಚಂಗಪ್ಪ, ಮಂಜುನಾಥ್ ಸೇರಿದಂತೆ ಹಲವರು ಇದ್ದರು.