ಪೊನ್ನಂಪೇಟೆ, ಡಿ. ೧೯: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರ ಮೇಲೆ ವ್ಯಕ್ತಿಯೋರ್ವರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಶ್ರೀಮಂಗಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ತಾ. ೧೯ ರಂದು ನಡೆದಿದೆ.
ಹುದಿಕೇರಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಹುದಿಕೇರಿ ಪಟ್ಟಣದ ಮಾರ್ಕೆಟ್ ಪಕ್ಕದಲ್ಲಿರುವ ಆರ್.ಎಂ.ಸಿ.ಯಿAದ ನಿರ್ಮಿಸಿದ ಕಟ್ಟಡವನ್ನು ಇತ್ತೀಚೆಗೆ ನಡೆದ ಟೆಂಡರ್ ಪ್ರಕ್ರಿಯೆಯ ಅನುಸಾರ ಕರುಂಬಯ್ಯ ಎಂಬುವವರಿಗೆ ನೀಡಲಾಗಿದ್ದು, ಅವರಿಗೆ ಮಳಿಗೆಯ ಕೀಲಿಕೈ ನೀಡಲು ಮತ್ತು ಆ ಕಟ್ಟಡದ ಹಿಂಭಾಗ ಇತ್ತೀಚೆಗೆ ನಡೆದ ಅಗ್ನಿ ಅವಘಡದ ಬಗ್ಗೆ ಪರಿಶೀಲಿಸಲು ಪಂಚಾಯಿತಿಯವರು ತೆರಳಿದ್ದ ಸಂದರ್ಭ, ಈ ಹಿಂದೆ ಅದೇ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಕಾವೇರಪ್ಪ ಎಂಬವರು ಈ ಕಟ್ಟಡದ ವ್ಯಾಜ್ಯವು ನ್ಯಾಯಾಲಯದಲ್ಲಿದ್ದು, ಇದನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಲ್ಲದೆ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಪಂಚಾಯಿತಿ ಅಧ್ಯಕ್ಷೆ ಕುಪ್ಪಣಮಾಡ ಕಾವೇರಮ್ಮ ಅವರ ಕೈಯನ್ನು ಹಿಡಿದು ಎಳೆದು, ಇತರ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಶ್ರೀಮಂಗಲ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಹುದಿಕೇರಿ ಮಾರ್ಕೆಟ್ ಸಮೀಪ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಗೋಣಿಕೊಪ್ಪ ಆರ್‌ಎಂಸಿ ಸಂಸ್ಥೆಯವರು ನಿರ್ಮಿಸಿದ ಈ ಕಟ್ಟಡವನ್ನು ಕಾವೇರಪ್ಪನವರಿಗೆ ಹುದಿಕೇರಿ ಪಂಚಾಯಿತಿಯ ಈ ಹಿಂದಿನ ಆಡಳಿತ ಮಂಡಳಿಯವರು ೨೦೧೬ರಲ್ಲಿ ನಿಯಮಾನುಸಾರ ಬಾಡಿಗೆಗೆ ನೀಡಿದ್ದರು, ಆ ಸಂದರ್ಭ ಒಮ್ಮೆ ರೂ. ೭೦,೦೦೦ ಸಾವಿರ ಮತ್ತು ಮತ್ತೊಮ್ಮೆ ರೂ. ೩೦,೦೦೦ ನೀಡಿದ್ದು, ನಂತರದ ೯ ವರ್ಷಗಳಲ್ಲಿ ಯಾವುದೇ ಬಾಡಿಗೆ ಹಣವನ್ನು ನೀಡದೆ ಸತಾಯಿಸುತ್ತಿರುವುದಾಗಿ ಆರೋಪಿಸಲಾಗಿದೆ. ಇದರ ಬಗ್ಗೆ ಈ ಹಿಂದೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಈ ಸಮಸ್ಯೆಯ ಬಗ್ಗೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಲಾಗಿದೆ.
ಇದರ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯವರು ಪ್ರಶ್ನಿಸಿದಾಗ ಆ ಕಟ್ಟಡವು ತಮಗೆ ಸೇರಿದ್ದು ಬಾಡಿಗೆ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಅಧ್ಯಕ್ಷೆ ಕಾವೇರಮ್ಮ ಅವರು ಹೇಳಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚೋಂದು, ಸದಸ್ಯರು ಹಾಗೂ ಇನ್ನಿತರರು ಇದ್ದರು.
ಕಾವೇರಪ್ಪ ಅವರಿಂದ ಪ್ರತಿದೂರು
ಈ ಘಟನೆಗೆ ಸಂಬAಧಿಸಿದAತೆ ಕಾವೇರಪ್ಪ ಅವರು, ಪಂಚಾಯಿತಿಯವರು ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ. ಎರಡೂ ಕಡೆಯ ದೂರನ್ನು ಸ್ವೀಕರಿಸಿರುವ ಶ್ರೀಮಂಗಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.