ಸೋಮವಾರಪೇಟೆ, ಡಿ. ೧೯: ಗುಜರಾತಿನಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್‌ನಲ್ಲಿ ಭಾಗವಹಿಸಿದ್ದ ದೊಡ್ಡಮಳ್ತೆ ಗ್ರಾಮದ ವಿದ್ಯಾರ್ಥಿ ಡಿ.ಆರ್. ಅನೀಶ್, ೧೮ ವರ್ಷ ವಯೋಮಾನದೊಳಗಿನವರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಹಿನ್ನೆಲೆ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪೌರ ಸನ್ಮಾನ ನಡೆಯಿತು.

ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪ್ರೇಮಿಗಳು, ಸಾರ್ವಜನಿಕರು ಪ್ರಶಸ್ತಿ ವಿಜೇತ ಕ್ರೀಡಾಪಟು ಅನೀಶ್‌ನನ್ನು ಸನ್ಮಾನಿಸಿ, ಶುಭ ಹಾರೈಸಿದರು.

ದೊಡ್ಡಮಳ್ತೆ ಗ್ರಾಮದ ಡಿ.ಬಿ. ರಾಜೇಶ್ ಹಾಗೂ ವಿಮಲ ದಂಪತಿ ಪುತ್ರ, ಶನಿವಾರಸಂತೆ ಕಾವೇರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅನೀಶ್, ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್-೨೦೨೫ರಲ್ಲಿ ಭಾಗವಹಿಸಿದ್ದು, ೧೮ ವರ್ಷದೊಳಗಿನ ವಯೋಮಾನದವರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟçಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ಇದರೊಂದಿಗೆ ೧೦೦ ಮೀಟರ್ ಹರ್ಡಲ್ಸ್ನಲ್ಲಿ ತೃತೀಯ ಸ್ಥಾನದೊಂದಿಗೆ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಪ್ರಶಸ್ತಿಯೊಂದಿಗೆ ಗ್ರಾಮಕ್ಕೆ ಆಗಮಿಸಿದ ಅನೀಶ್‌ನನ್ನು ದೊಡ್ಡಮಳ್ತೆ ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ವಾದ್ಯಗೋಷ್ಠಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ, ನಂತರ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಪಟ್ಟಣಕ್ಕೆ ಕರೆತಂದು ಜೇಸೀ ವೇದಿಕೆಯಲ್ಲಿ ಪೌರ ಸನ್ಮಾನ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಅವರು, ಗ್ರಾಮೀಣ ಭಾಗದಲ್ಲಿ ಬಡತನದ ನಡುವೆ ವಿದ್ಯಾಭ್ಯಾಸ ಮಾಡುತ್ತಿರುವ ಅನೀಶ್, ರಾಷ್ಟçಮಟ್ಟದಲ್ಲಿ ಚಿನ್ನದ ಪದಕ ಪಡೆದಿರುವುದು ನಮ್ಮ ಗ್ರಾಮ ಮಾತ್ರವಲ್ಲದೇ, ಕೊಡಗು-ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದರು.

ಉದಯೋನ್ಮುಖ ಕ್ರೀಡಾಪಟು ವಿಗೆ ಗ್ರಾಮ ಪಂಚಾಯಿತಿಯಿAದಲೂ ಎಲ್ಲಾ ರೀತಿಯ ನೆರವು ಒದಗಿಸ ಲಾಗುವುದು ಎಂದು ಭರವಸೆ ನೀಡಿದರು.

ಗೌಡಳ್ಳಿ ವಿ.ಎಸ್.ಎಸ್.ಎನ್. ನಿರ್ದೇಶಕ ಹೆಚ್.ಆರ್. ಸುರೇಶ್ ಮಾತನಾಡಿ, ಯಾವುದೇ ತರಬೇತಿಯಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಯೋರ್ವ ರಾಷ್ಟ್ರಮಟ್ಟದಲ್ಲಿ ಇಂತಹ ಸಾಧನೆ ತೋರಿರುವುದು ಶ್ಲಾಘನೀಯ. ಇಂತಹ ಕ್ರೀಡಾಪಟುಗಳಿಗೆ ಸಮಾಜ ಸಹಕಾರ ನೀಡಬೇಕು ಎಂದು ಅಭಿಪ್ರಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಈಗಾಗಲೇ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟಿçÃಯ ಮಟ್ಟದಲ್ಲಿ ಮಿಂಚಿದ್ದಾರೆ. ಇವರ ಸಾಲಿಗೆ ಅನೀಶ್ ಸೇರ್ಪಡೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ನಲ್ಲಿಯೂ ಭಾಗವಹಿಸಿ ಪ್ರಶಸ್ತಿ ಗಳಿಸಲಿ. ಇಂತಹ ಕ್ರೀಡಾಪಟುಗಳಿಗೆ ಸ್ಥಳೀಯ ಮಟ್ಟದಲ್ಲಿ ತರಬೇತಿ ಲಭಿಸಿದರೆ ಉತ್ತಮ ಸಾಧನೆ ತೋರಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಎಂ.ಬಿ. ಉಮೇಶ್, ದೊಡ್ಡಮಳ್ತೆ ಗ್ರಾ.ಪಂ. ಸದಸ್ಯ ರುದ್ರಪ್ಪ, ಉದ್ಯಮಿ ಪದ್ಮನಾಭ್, ಮೋಟಾರ್ ಯೂನಿಯನ್ ಕಾರ್ಯದರ್ಶಿ ಮಣಿ ಕುಶಾಲಪ್ಪ, ವಿಎಸ್‌ಎಸ್‌ಎನ್ ನಿರ್ದೇಶಕ ಸುಭಾಷ್ ತಿಮ್ಮಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಅನೀಶ್ ಅವರ ಪೋಷಕರಾದ ರಾಜೇಶ್ ಮತ್ತು ವಿಮಲ ಉಪಸ್ಥಿತರಿದ್ದರು.

ರಾಷ್ಟçಮಟ್ಟದಲ್ಲಿ ಚಿನ್ನದ ಪದಕಕ್ಕೆ ಭಾಜನನಾದ ಅನೀಶ್‌ಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಸನ್ಮಾನಿಸಿದರು.