ಸಿದ್ದಾಪುರ, ಡಿ. ೧೯: ಅಮ್ಮತ್ತಿ ಗ್ರಾಮ ಪಂಚಾಯಿತಿ ೨೦೨೫ -೨೬ ನೇ ಸಾಲಿನ ಗ್ರಾಮಸಭೆ ಅಧ್ಯಕ್ಷೆ ಹೆಚ್.ವಿ. ಸುಮಲತ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ನೀಡದೆ ಸದಸ್ಯರೇ ಸಭೆಯನ್ನು ಮುನ್ನಡೆಸಿದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ತಡವಾಗಿ ಸಭೆಗೆ ಹಾಜರಾದ ಬಗ್ಗೆ ಗ್ರಾಮಸ್ಥರು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮೇಲಧಿಕಾರಿಗಳೊಂದಿಗೆ ಸಭೆಯಿದ್ದ ಹಿನ್ನೆಲೆ ತಡವಾಯಿತು ಎಂದು ಸಮರ್ಥಿಸಿಕೊಂಡು ಕ್ಷಮೆಯಾಚಿಸಿದರು.
ಗ್ರಾಮಸ್ಥರಾದ ಶಿಜು ಮಾತನಾಡಿ, ಗ್ರಾಮ ಸಭೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಸಭೆಗೆ ಬೆರಳೆಣಿಕೆಯ ಮಂದಿ ಭಾಗವಹಿಸಿದ್ದಾರೆ.
ಪಂಚಾಯಿತಿ ನೇತೃತ್ವದಲ್ಲಿ ವಾಟ್ಸಾö್ಯಪ್ ಗ್ರೂಪ್ ರಚಿಸಿ ಸರಕಾರದ ಸೌಲಭ್ಯಗಳ ಬಗೆ ಜನರಿಗೆ ಮಾಹಿತಿ ನೀಡಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ಕಸವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಸ್ವಚ್ಛ ಭಾರತ ಮಿಷನ್ನ ಅಡಿಯಲ್ಲಿ ದೊರೆತ ವಾಹನವು ಕೆಟ್ಟುನಿಂತಿದ್ದು ಇನ್ನೂ ದುರಸ್ತಿಪಡಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಗ್ರಾಮಸ್ಥ ನೌಷಾದ್ ಮಾತನಾಡಿ, ಗ್ರಾಮದಲ್ಲಿ ಜಲ್ಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ಮನೆಗಳಿಗೆ ನಲ್ಲಿ ಅಳವಡಿಸಲಾಗಿದ್ದು, ನೀರಿನ ಸ್ಥಾನ ಗುರುತಿಸದೆ ಎರಡು ವಾರ್ಡ್ನಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಇಲ್ಲಿ ಕೊರೆದ ಎರಡು ಕೊಳವೆ ಬಾವಿಗಳಲ್ಲಿಯೂ ನೀರು ಲಭಿಸಿಲ್ಲ. ನಿರ್ಮಾಣಗೊಂಡ ಟ್ಯಾಂಕ್ ಕಾಂಕ್ರೀಟ್ ಮಾಡಿ ಕ್ಯೂರಿಂಗ್ ಮಾಡದ ಪರಿಣಾಮ ಬಿರುಕು ಬಿಟ್ಟಿದೆ.
ಯೋಜನೆ ಹಣವು ದುರುಪಯೋಗವಾಗಿದೆ ಎಂದು ಸಭೆಗೆ ಆಗಮಿಸಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಂಜಿನಿಯರ್ ರಶ್ಮಿ ಅವರನ್ನು ಪ್ರಶ್ನಿಸಿದರು.
ಪುಲಿಯೇರಿ ವಾರ್ಡ್ ನಿವಾಸಿ ಡೇವಿಡ್ ಮಾತನಾಡಿ, ಗ್ರಾಮ ಸಭೆಗೆ ಆಗಮಿಸಿ ಸಮಸ್ಯೆ ಹೇಳಲು ಬಂದರೆ ಅಧ್ಯಕ್ಷರನ್ನು ಮಾತನಾಡಲು ಬಿಡುತ್ತಿಲ್ಲ. ಎಲ್ಲಾ ಸದಸ್ಯರೆ ನಿರ್ವಹಿಸುತ್ತಿದ್ದಾರೆ ಸೌಲಭ್ಯಗಳ ಕುರಿತು ಯಾವುದೇ ಮಾಹಿತಿ ತಿಳಿಯುತ್ತಿಲ್ಲ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಮಾತನಾಡಿ, ಜಲ್ಜೀವನ್ ಮಿಷನ್ ಕಾಮಗಾರಿ ವಿಳಂಬ ಮತ್ತು ಕಳಪೆಯಾಗಿರುವುದು ಗಮನÀಕ್ಕೆ ಬಂದಿದ್ದು, ಈ ಸಂಬAಧ ಲೋಕಸಭೆ ಸದಸ್ಯರ ಗಮನಕ್ಕೆ ತಂದಿದ್ದು ಪರ್ಯಾಯ ಎರಡು ಕೊಳವೆ ಬಾವಿಯನ್ನು ಕೊರೆಯಲು ಆದೇಶ ಬಂದಿದೆ. ಗೃಹ ನಿರ್ಮಾಣಕ್ಕೆ ಫಲಾನುಭವಿಗಳ ಆಯ್ಕೆಗೆ ಭೂ ಪರಿವರ್ತನೆ ಹಾಗೂ ಸಮರ್ಪಕ ದಾಖಲೆ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ಸದಸ್ಯರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.