ಪ್ರಜ್ವಲ್ ಜಿ.ಆರ್.
ಮಡಿಕೇರಿ, ಡಿ. ೧೯: ಪಶ್ಚಿಮ ಘಟ್ಟದಲ್ಲಿ ಬೇಸಿಗೆಯಲ್ಲಿ ಕಾಡುವ ಧಗಧಗ ಉರಿ ಬಿಸಿಲು ಹಾಗೂ ಮಳೆಗಾಲದಲ್ಲಿನ ಅಪಾಯಕಾರಿ ವಾತಾವರಣದಿಂದಾಗಿ ಚಾರಣಪ್ರಿಯರು ಚಳಿಗಾಲದಲ್ಲಿ ಹೆಚ್ಚಾಗಿ ಚಾರಣ ಮಾಡಲು ಬಯಸುತ್ತಾರೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗೂ ಚಳಿಗಾಲದ ಮೋಡರಹಿತ ಆಗಸವು ಶಿಖರಗಳನ್ನೇರುವ ಪ್ರಕೃತಿಪ್ರಿಯರಿಗೆ ವಿಹಂಗಮ ನೋಟದ ಅವಕಾಶ ನೀಡುತ್ತದೆ. ಐ.ಟಿ - ಬಿ.ಟಿ ಕೆಲಸದ ಒತ್ತಡಬರಿತ ಜೀವನÀಕ್ರಮ ಪಾಲಿಸುವ, ದಿನಪೂರ್ತಿ ಒಂದೇ ಕಡೆ ಕುಳಿತು ಕೈ-ಕಾಲು-ಬೆನ್ನು ಅಲುಗಾಡಿಸಲೂ ಸಮಯವಿಲ್ಲದ ಟೆಕ್ಕಿ ಯುವಕ-ಯುವತಿಯರೇ ಅಧಿಕವಾಗಿ ವಾರಾಂತ್ಯಗಳಲ್ಲಿ ಚಾರಣಕ್ಕೆ ಹೋಗಲು ಇಚ್ಚಿಸುತ್ತಾರೆ. ದೈಹಿಕವಾಗಿ ಸಕ್ರಿಯವಾಗಲು ಹಾಗೂ ಮನಸ್ಸಿನ ಶಾಂತಿಗಾಗಿ ಪಶ್ಚಿಮ ಘಟ್ಟಗಳಲ್ಲಿನ ಬೆಟ್ಟಗಳನ್ನು ಏರುತ್ತಾರೆ.
ಇಂತಹದೊAದು ಬೆಟ್ಟಗಳಲ್ಲಿ ಕೊಡಗು ಜಿಲ್ಲೆಯಲ್ಲಿಯೇ ಅತಿ ಎತ್ತರದಲ್ಲಿರುವ ಕಕ್ಕಬ್ಬೆ-ಯವಕಪಾಡಿಯಲ್ಲಿರುವ ತಡಿಯಂಡಮೋಳ್ ಶಿಖರವು ಹೆಚ್ಚಿನ ಪ್ರಖ್ಯಾತಿ ಪಡೆದಿದೆ. ‘ಮೀಡಿಯಂ ಡಿಫಿಕಳ್ಟಿ ಟ್ರೆಕ್’ ಆಗಿರುವ ತಡಿಯಂಡಮೋಳ್, ಸಮುದ್ರ ಮಟ್ಟದಿಂದ ೧,೭೪೮ ಮೀಟರ್ (೫,೭೩೫ ಅಡಿ) ಎತ್ತರದಲ್ಲಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರಿನಲ್ಲಿರುವ ಮುಳ್ಳಯ್ಯನಗಿರಿ, ಬಾಬಾ-ಬುಡಂಗಿರಿ ಹಾಗೂ ಕುದ್ರೆಮುಖ ಬಳಿಕ ಎತ್ತರದಲ್ಲಿ ೪ನೇ ಸ್ಥಾನದಲ್ಲಿರುವ ತಡಿಯಂಡಮೋಳ್ ಕೊಡಗಿನಲ್ಲಿ ಮೊದಲನೇ ಸ್ಥಾನ ಗಳಿಸಿದೆ.
ಅಕ್ಟೋಬರ್‌ನಿಂದ ಈವರೆಗೆ ಈ ಶಿಖರವನ್ನು ೨,೫೦೦ ಮಂದಿ ಏರಿರುವುದು ಚಾರಣಪ್ರಿಯರ ಉತ್ಸಾಹವನ್ನು ತೋರಿಸುತ್ತದೆ. ಹೊರಜಿಲ್ಲೆ, ಹೊರ ರಾಜ್ಯದ ಐ.ಟಿ-ಬಿಟಿ ಉದ್ಯೋಗಿಗಳು ಮಾತ್ರವಲ್ಲದೆ ಕೊಡಗಿನಲ್ಲಿಯೇ ಇರುವ ಹಲವು ಪರಿಸರ ಪ್ರೇಮಿಗಳೂ ಕೂಡ ಯುವಕ-ಯುವತಿ-ವಯಸ್ಕರೆಂಬ ಭೇಧವಿಲ್ಲದೆ ತಡಿಯಂಡಮೋಳ್ ಏರಲು ಆಸಕ್ತಿ ತೋರುತ್ತಿದ್ದಾರೆ.
ಕೋವಿಡ್ ಬಳಿಕ ಹೆಚ್ಚಿದ ಆಸಕ್ತಿ - ಅರಣ್ಯ ಇಲಾಖೆಯಿಂದ ಆನ್‌ಲೈನ್ ಬುಕ್ಕಿಂಗ್ ಪ್ರಾರಂಭ
ಕೋವಿಡ್ ಮಾರಣಾಂತಿಕ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಹೇರಲಾಗಿದ್ದ ಕ್ವಾರಂಟೈನ್, ವರ್ಕ್ ಫ್ರಮ್ ಹೋಮ್ ಕ್ರಮದಿಂದಾಗಿ ಬಹಳಷ್ಟು ಜನರು, ಹೆಚ್ಚಾಗಿ ಯುವಕ-ಯುವತಿಯರು ಮಾನಸಿಕವಾಗಿ ಹಿಂಸೆಗೊಳಗಾಗಿದ್ದರು. ಪ್ರವಾಸೋದ್ಯಮವೂ ಸಂಪೂರ್ಣವಾಗಿ ನಿರ್ಬಂಧಕ್ಕೊಳಗಾಗಿದ್ದ ಕಾರಣ ವಿಶ್ರಾಂತಿಯೇ ಇಲ್ಲದೆ ದಿನವಿಡೀ ಕಂಪ್ಯೂಟರ್‌ಗಳ ಮುಂದೆಯೇ ಕುಳಿತು ಕೆಲಸ ಮಾಡುವ ಪರಿ ಉದ್ಯೋಗಿಗಳಿಗೆ ಬಂದೊದಗಿತ್ತು. ವೈರಸ್ ಹರಡುವಿಕೆ ಕಡಿಮೆಯಾದ ಬಳಿಕ ೨೦೨೨ರಲ್ಲಿ ಕ್ವಾರಂಟೈನ್ ತೆರವು ಮಾಡಿದ ಕ್ಷಣ ಪ್ರವಾಸೋದ್ಯಮ ಮತ್ತೆ ಜೀವಪಡೆಯಿತು. ಹೆಚ್ಚಿನ ಮಂದಿ ಪ್ರಕೃತಿಯ ನಡುವೆ ಬೆರೆಯಲು ಇಚ್ಚೆ ಪಟ್ಟಿದ್ದು ಚಾರಣಕ್ಕೆ ಹೋಗಬಯಸಿದರು.
ಕೊಡಗು ಅರಣ್ಯ ವಲಯಕ್ಕೆ ಸೇರಿರುವ ಸುಬ್ರಹ್ಮಣ್ಯ ಹಾಗೂ ಸೋಮವಾರಪೇಟೆಯ ಬೀದಳ್ಳಿಯಲ್ಲಿ ಪ್ರವೇಶವಿರುವ ಪ್ರಖ್ಯಾತ ಕುಮಾರ ಪರ್ವತವನ್ನೇರಲು ೨೦೨೪ರ ಜನವರಿಯಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಆತಂಕ ಸೃಷ್ಟಿಯಾಗಿತ್ತು. ಅಷ್ಟೂ ಮಂದಿ ಒಂದೇ ಸಮನೆ ಬೆಟ್ಟವನ್ನೇರಲು ಅಸಾಧ್ಯವಾಗಿತ್ತು. ಕೆಲವರು ಹಿಂತಿರುಗಿದ್ದು, ನೂಕು-ನುಗ್ಗಲೂ ಸೃಷ್ಟಿಯಾಗಿತ್ತು. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಅರಣ್ಯ ಸಚಿವÀ ಈಶ್ವರ್ ಖಂಡ್ರೆ ಅವರು ಪಶ್ಚಿಮ ಘಟ್ಟಗಳ ಚಾರಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದರು. ಕೆಲವೊಂದು ಚಾರಣ ಪ್ರದೇಶಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ಇದ್ದು, ಇಂತಹ ಸ್ಥಳಗಳಲ್ಲಿ ಮಾತ್ರ ಚಾರಣಿಗರಿಗೆ ಅವಕಾಶ ನೀಡುವಂತೆ ಆದೇಶ ಹೊರಡಿಸಿದ್ದರು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಬಳಿಕ ರಾಜ್ಯಾದ್ಯಂತ ಎಲ್ಲಾ ಪ್ರಸಿದ್ಧ ಚಾರಣಗಳನ್ನೂ ಆನ್‌ಲೈನ್ ಮೂಲಕವೇ ಕಾಯ್ದಿರಿಸುವ ಕ್ರಮವನ್ನು ಖಡ್ಡಾಯ ಮಾಡಲಾಯಿತು.
ತಡಿಯಂಡಮೋಳ್ ಚಾರಣವನ್ನು ಕೂಡ ಇದೇ ಆನ್‌ಲೈನ್ ಬುಕ್ಕಿಂಗ್ ಮೂಲಕ ಕೈಗೊಳ್ಳಬೇಕಿದೆ. ಪ್ರತಿನಿತ್ಯ ೩೦೦ ಗರಿಷ್ಠ ಚಾರಣಿಗರಿಗೆ ಅವಕಾಶವಿದೆ. ೧ ಟಿಕೆಟ್‌ಗೆ ರೂ.೨೫೦, ಮಕ್ಕಳಿಗೆ ರೂ.೧೫೦ ಪ್ರವೇಶ ಶುಲ್ಕ ವಿಧಿಸಲಾಗಿದೆ. ಈ ಕ್ರಮದಿಂದಾಗಿ ಚಾರಣವು ಸುಸೂತ್ರವಾಗಿ ನಡೆಯುತ್ತಿದೆ. hಣಣಠಿs://ಚಿಡಿಚಿಟಿಥಿಚಿvihಚಿಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/ - ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಚಾರಣ ಟಿಕೆಟ್‌ಅನ್ನು ಕಾಯ್ದಿರಿಸಬಹುದಾಗಿದೆ.
ಕೊಡಗು ಅರಣ್ಯ ವ್ಯಾಪ್ತಿಯಲ್ಲಿ ಬೀದಳ್ಳಿ-ಕುಮಾರಪರ್ವತ-ಬೀದಳ್ಳಿ, ಬೀದಳ್ಳಿ-ಕುಮಾರಪರ್ವತ-ಸುಬ್ರಹ್ಮಣ್ಯ, ಸುಬ್ರಹ್ಮಣ್ಯ-ಶೇಷಪರ್ವತ-ಸುಬ್ರಹ್ಮಣ್ಯ, ತಲಕಾವೇರಿ-ನಿಶಾನಿಮೊಟ್ಟೆ ಹಾಗೂ ತಡಿಯಂಡಮೋಳ್ ಚಾರಣಗಳನ್ನು ಕಾಯ್ದಿರಿಸಬಹುದಾಗಿದೆ.