ಶನಿವಾರಸಂತೆ, ಡಿ. ೧೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರು ಅಧ್ಯಕ್ಷತೆಯಲ್ಲಿ ಸಂಜೀವಿನಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಆರಂಭದಲ್ಲೇ ದುಂಡಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಬಾರದು, ಶನಿವಾರಸಂತೆ ಗ್ರಾಮ ಪಂಚಾಯಿತಿ ಬೇಕಾದರೆ ಪಟ್ಟಣ ಪಂಚಾಯಿತಿ ಆಗಲಿ, ಕೃಷಿ ಪ್ರಧಾನವಾಗಿರುವ ದುಂಡಳ್ಳಿ ಗ್ರಾಮ ಪಂಚಾಯಿತಿ ಚಿಕ್ಕದಾದರೂ ಅದರ ಅಸ್ತಿತ್ವ ಉಳಿಯಬೇಕು ಎಂಬ ಒತ್ತಾಯ ಪ್ರತಿಧ್ವನಿಸಿತು.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮುಖಂಡರುಗಳಾದ ಮಾದ್ರೆ ಪ್ರಸಾದ್, ಬಿ.ಎಂ. ಪ್ರಕಾಶ್, ಕೆ.ಟಿ. ಹರೀಶ್, ರಕ್ಷಿತ್, ಕಿರಣ್, ಕೊಮಾರಪ್ಪ ಮತ್ತಿತರರು ಪರ-ವಿರೋಧದ ಚರ್ಚೆಯಲ್ಲಿ ಪಾಲ್ಗೊಂಡು ಮುಂದಿನ ಅವಧಿಯಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಬಾರದು ಎಂದು ವಿರೋಧ ವ್ಯಕ್ತಪಡಿಸಿ ನಡಾವಳಿಯಲ್ಲಿ ದಾಖಲು ಮಾಡುವಂತೆ ಆಗ್ರಹಿಸಿದರು. ಹಿರಿಯ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ೨೨ ಹಳ್ಳಿಗಳನ್ನು ಒಳಗೊಂಡಿರುವ ದುಂಡಳ್ಳಿ ಗ್ರಾಮ ಪಂಚಾಯಿತಿ ಬೆಳೆದಿದೆ. ಪಟ್ಟಣ ಪಂಚಾಯಿತಿಯಾಗಲಿ ಎಂಬುದು ೧೨ ವರ್ಷಗಳ ಹಿಂದಿನ ಪ್ರಸ್ತಾಪವಾಗಿದೆ. ಶನಿವಾರಸಂತೆ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಅಭಿವೃದ್ಧಿ ಹೊಂದಲಿ. ಆದರೆ, ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿಗಾಗಿ ಉಳಿಯಲೇ ಬೇಕು ಎಂದರು.

ಸದಸ್ಯ ಸಿ.ಜೆ. ಗಿರೀಶ್ ಮಾತನಾಡಿ, ದುಂಡಳ್ಳಿ ಪಂಚಾಯಿತಿ ವ್ಯಾಪ್ತಿ ಬೇಕೇ ಬೇಕು. ಗ್ರಾಮಸ್ಥರಲ್ಲಿ ಪರ-ವಿರೋಧ ಅಭಿಪ್ರಾಯವಿದ್ದರೂ ದುಂಡಳ್ಳಿ ಗ್ರಾಮ ಪಂಚಾಯಿತಿಯಾಗಿಯೇ ಉಳಿದು ಗುರುತಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಸದಸ್ಯ ದೇವರಾಜ್ ಮಾತನಾಡಿ, ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿರುವ ದುಂಡಳ್ಳಿ ಗ್ರಾಮ ಪಂಚಾಯಿತಿ ಏಕೈಕ ಪಂಚಾಯಿತಿಯಾಗಿದ್ದು, ನರೇಗಾ ಸೌಲಭ್ಯ ಹೊಂದಿದ್ದು ೪ ಗ್ರಾಮಗಳು ಪಟ್ಟಣ ಪಂಚಾಯಿತಿಗೆ ಸೇರಿದರೂ ೧೮ ಗ್ರಾಮಗಳ ವಿರೋಧವಿದೆ. ಈ ಬಗ್ಗೆ ನಿರ್ಣಯ ಮಾಡಬೇಕು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಗ್ರಾಮ ಮುಖಂಡರ, ಪಂಚಾಯಿತಿ ಸದಸ್ಯರ ಚರ್ಚೆಗೆ, ಅಭಿಪ್ರಾಯಗಳಿಗೆ ಸ್ಪಂದಿಸಿ ಮಾತನಾಡಿ, ಸಭೆಯಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಬೇಕೇ ಆಗಬಾರದೆ ಎಂಬ ಬಗ್ಗೆ ಶಾಸಕರನ್ನು ಭೇಟಿಯಾಗಿ ನಿರ್ಧರಿಸಬಹುದು ಎಂದು ಸಲಹೆ ನೀಡಿದರು. ನೋಡಲ್ ಅಧಿಕಾರಿ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ನಿರ್ದೇಶಕಿ ಮಿಲನ್ ಭರತ್ ಮಾತನಾಡಿ, ಪಟ್ಟಣ ಪಂಚಾಯಿತಿಯಾಗುವ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರ ಪರ-ವಿರೋಧ ವ್ಯಕ್ತವಾಗಿದೆ. ಶನಿವಾರಸಂತೆ-ದುAಡಳ್ಳಿ ಗ್ರಾಮ ಪಂಚಾಯಿತಿಗಳ ಮಾಹಿತಿ ಪಡೆದು ನಿರ್ಧರಿಸಬೇಕು. ಸಾರ್ವಜನಿಕರ ಅಭಿಪ್ರಾಯಗಳನ್ನು ಶಾಸಕರ ಗಮನಕ್ಕೆ ತಂದು ತೀರ್ಮಾನಿಸಬೇಕು ಎಂದರು. ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಶು ವೈದ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಎಸ್.ಪಿ. ಭಾಗ್ಯ, ಪೂರ್ಣಿಮಾ ಕಿರಣ್, ಮನು ಮಹಾಂತೇಶ್, ನಂದಿನಿ, ನಿತಿನ್, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಿಡಿಓ ಸ್ವಾಗತಿಸಿದರು. ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರು ವಂದಿಸಿದರು.