ವೀರಾಜಪೇಟೆ, ಡಿ. ೧೯ : ಮಾದಕ ವಸ್ತುಗಳ ಉಪಯೋಗದಿಂದ ಮಾತ್ರ ಮಾರಕ ಕಾಯಿಲೆಗಳಿಗೆ ತುತ್ತಾಗುವುದಿಲ್ಲ. ಆಹಾರ ಪದ್ಧತಿಯ ಅಸಮತೋಲನದಿಂದಾಗಿಯು ಸಹ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಆರ್.ಐ.ಹೆಚ್.ಪಿ. ಆಸ್ಪತ್ರೆ ಅಮ್ಮತ್ತಿ ಮುಖ್ಯ ಶಸ್ತç ಚಿಕಿತ್ಸಕರಾದ ಡಾ. ಚಂದ್ರು ಸಿ.ಕೆ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ವೀರಾಜಪೇಟೆ ತಾಲೂಕು ಘಟಕ, ಆರ್.ಐ.ಹೆಚ್.ಪಿ. ಆಸ್ಪತ್ರೆ ಅಮ್ಮತ್ತಿ ಮತ್ತು ಫಾತಿಮಾ ಮಾತೆ ದೇವಾಲಯ ಕೆದಮುಳ್ಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆ ಆಯೋಜಿಸಲಾಗಿತ್ತು ಮತ್ತು ಸೆಹೇಲಿ ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ.ಚಂದ್ರು ಅವರು ಸರಿಯಾದ ಸಮಯಕ್ಕೆ ನಿದ್ರೆಗೆ ಜಾರದಿರುವುದು, ಕಲ್ಮಶ ಪಾನಿಯ ಸೇವನೆಯಿಂದಾಗಿ ಅನೇಕ ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗುತಿದ್ದಾರೆ. ಪೂರ್ವಜರ ಆಹಾರಗಳ ಪದ್ಧತಿಯಲ್ಲಿ ಮಿತ ಆಹಾರ ಸೇವನೆ ಅಧಿಕ ಶ್ರಮ, ಪ್ರಕೃತಿದತ್ತವಾದ ಗಿಡ- ಸೊಪ್ಪು ತರಕಾರಿಗಳ ಸೇವನೆಯಿಂದಾಗಿ ದೀರ್ಘಕಾಲದ ಬದುಕು ಕಂಡುಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ರಾಸಾಯಿನಿಕ ಗೊಬ್ಬರಗಳ ಬಳಕೆ ಮತ್ತು ಶ್ರೀಘ್ರವಾಗಿ ಲಭಿಸುವ ತಿಂಡಿ ತಿನಿಸುಗಳ ಸೇವನೆ ಹಾಗೂ ಆಹಾರ ಕ್ರಮದಲ್ಲಿ ವ್ಯತ್ಯಾಸದಿಂದಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಜೀವನ ಕೊನೆಗಾಣಿಸುವ ಹಂತಕ್ಕೆ ಬಂದು ನಿಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘ ವೀರಾಜಪೇಟೆಯ ನಿರ್ದೇಶಕರು ಮತ್ತು ಕಾರ್ಯಕ್ರಮ ಸಂಚಾಲಕರಾದ ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ವೀರಾಜಪೇಟೆ ತಾಲೂಕು ಗ್ರಾಮೀಣ ಆರೋಗ್ಯ, ಗ್ರಾಮೀಣ ಶಿಕ್ಷಣ, ಗ್ರಾಮೀಣ ಕಳಕಳಿಯ ಕಾರ್ಯಕ್ರಮಗಳಿಗೆ ಒತ್ತು ನೀಡಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಪ್ರಥಮ ಬಾರಿಗೆ ದಾನಿಗಳ ನೆರವಿನಿಂದ ಯುವತಿಯರು ಮಹಿಳೆಯರಿಗೆ ಆರೋಗ್ಯ ರಕ್ಷಣೆಗಾಗಿ “ಸೆಹೇಲಿ ಆರೋಗ್ಯ ಕಿಟ್” ವಿತರಣೆ ನೂತನ ಕಾರ್ಯಕ್ರಮ ಹಮ್ಮಿಕೊಂಡು ಚಾಲನೆ ನೀಡಲಾಗುತ್ತಿದೆ. ಗ್ರಾಮೀಣ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷÀ ಎಂ.ಎA. ಪರಮೇಶ್ವರ್ ಅವರು ಸೆಹೇಲಿ ಆರೋಗ್ಯ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಕೆಲವು ಖಾಸಗಿ ಆರೋಗ್ಯ ಕೇಂದ್ರಗಳು ಹಣ ಮಾಡುವ ಕೇಂದ್ರಗಳಾಗಿ ಪರಿವರ್ತಿತವಾಗಿದೆ. ಹಣ ಮಾಡುವ ಉದ್ದೇಶ ಬಿಟ್ಟು ಸಾಮಾಜಿಕ ಕಳಕಳಿ ಹೊಂದಿರುವ ಕೆಲವು ಕೇಂದ್ರಗಳು ಮಾತ್ರ ಬಡ ಜನತೆ ಪರವಾಗಿ ಕರ್ತವ್ಯ ನಿರ್ವಹಿಸುತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಆರ್.ಐ.ಹೆಚ್.ಪಿ ಆಸ್ಪತ್ರೆಯು ಗ್ರಾಮೀಣ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.
ಕಾರ್ಯನಿರತ ಪ್ರತಕರ್ತರ ಸಂಘದ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೫ ದಶಕಗಳ ಹಿಂದೆ ಆರೋಗ್ಯದಾಯವಾದ ಸಮಾಜವಿತ್ತು. ಸಂಪತ್ತು ಇರಲಿಲ್ಲ. ಆದರೇ ಮುಂದಿನ ಯುಗಗಳಲ್ಲಿ ಕೈತುಂಬಾ ಸಂಪತ್ತು ಇರುತ್ತದೆ ಆರೋಗ್ಯ ಇರುವುದಿಲ್ಲಾ. ಕಾರಣ ಪ್ರಸ್ತುತ ಕಾಲಘಟ್ಟದಲ್ಲಿ ಚಿಕ್ಕ ವಯಸ್ಸಿನಲ್ಲೇ ಜನಸಾಮಾನ್ಯರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸೆಹೇಲಿ ಆರೋಗ್ಯ ಕಿಟ್ ವಿರತಣೆಗೆ ಚಾಲನೆ ನೀಡಲಾಯಿತು, ಶಿಬಿರವು ಬೆಳಿಗ್ಗೆ ೧೦ ರಿಂದ ಆರಂಭವಾಗಿ ಮಧ್ಯಾಹ್ನ ೨- ಗಂಟೆಗೆ ಸಮಾಪ್ತಿಯಾಯಿತು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗಗಳಿಂದ ಆಗಮಿಸಿದ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬಾರಿಕಾಡ್ ಪೈಸಾರಿ, ಕೆ.ಬೋಯಿಕೇರಿ ಆಶ್ರಯ ಕಾಲೋನಿಯ ೧೩ ವರ್ಷ ಮೆಲ್ಪಟ್ಟ ಯುವತಿಯರು ಹಾಗೂ ೫೦ ವರ್ಷ ಕೆಳಗಿರುವ ಮಹಿಳೆಯರಿಗೆ ಹಾಗೂ ಕ್ಯಾಥರೀನ ಚಿತ್ತದನಿ ಆಶ್ರಮ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೆಹೇಲಿ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಆರ್.ಐ.ಹೆಚ್.ಪಿ ಆಸ್ಪತ್ರೆಯ ನೇತ್ರ ಚಿಕಿತ್ಸಕರಾದ ಡಾ. ವಿಜಯ ಸಿಂಹ, ಕ್ಯಾಥರೀನ ಚಿತ್ತದನಿ ಆಶ್ರಮ ಶಾಲೆಯ ಸಿಸ್ಟರ್ ಟ್ರೀಜಾ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಸಾಬ ಮುತ್ತಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ತೇಜಸ್ ಪಾಪಯ್ಯ, ಅಂಗನವಾಡಿ ಕಾರ್ಯಕರ್ತೆ ಕೆ.ಎಂ. ಉಷಾ ಕುಮಾರಿ, ಆರ್.ಐ.ಹೆಚ್.ಪಿ ಆಸ್ಪತ್ರೆ ಅಮ್ಮತ್ತಿ ಡಾ. ಶುಭ, ಡಯಲೀಸ್ ತಜ್ಞರಾದ ಸಂಯಮ ಗೌಡ, ಸಿಬ್ಬಂದಿಗಳು, ಕ್ಯಾಥರೀನ ಚಿತ್ತದನಿ ಆಶ್ರಮ ಶಾಲೆಯ ಸಿಸ್ಟರ್ ಮೇರಿ ಮಾರ್ಗರೇಟ್, ಫಾತಿಮ ಮಾತೆ ದೇವಾಲಯದ ವಿನ್ಸೆಂಟ್ ಹಾಗೂ ಗ್ರಾಮಸ್ಥರು ಶಿಬಿರದಲ್ಲಿ ಹಾಜರಿದ್ದರು.