ವನ್ಯಜೀವಿಗಳ ಬೇಟೆಗೆ ಉರುಳು ಬಳಸದಂತೆ ಸೂಚನೆ
ಚೆಟ್ಟಳ್ಳಿ, ಡಿ. ೧೯ : ಕಾಡುಪ್ರಾಣಿ ಮಾಂಸದ ಆಸೆಗಾಗಿ ಹಂದಿ, ಜಿಂಕೆ, ಕಡವೆ, ಮೊಲ ಇತ್ಯಾದಿ ಇವುಗಳನ್ನು ಹಿಡಿಯುವ ಉದ್ದೇಶದಿಂದ ಹಾಕುವ ತೋಟಗಳಲ್ಲಿ ಉರುಳುಗಳು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಅಡಿಯಲ್ಲಿ ಅಪರಾಧವಾಗುತ್ತದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಉರುಳುಗಳನ್ನು ಹಾಕುವುದು ಮತ್ತು ವನ್ಯ ಪ್ರಾಣಿಗಳನ್ನು ಹಿಡಿಯುವ ಪ್ರಯತ್ನ ಮಾಡುವುದೂ ಅಪರಾಧ. ಈ ರೀತಿಯ ಅಪರಾಧ ಮಾಡಿದಲ್ಲಿ ಕನಿಷ್ಟ ೩ ವರ್ಷ ಮತ್ತು ಗರಿಷ್ಠ ೭ ವರ್ಷಗಳ ಜೈಲು ಮತ್ತು ೫ ಲಕ್ಷ ರೂಪಾಯಿಗಳವರೆಗೂ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಭೂಮಿ ಮತ್ತು ತೋಟದಲ್ಲಿ ವನ್ಯಜೀವಿಗಳ ಮಾಂಸದ ಆಸೆಗೆ ಉರುಳುಗಳನ್ನು ಹಾಕಿದಲ್ಲಿ ಅಂತಹ ಉರುಳುಗಳನ್ನು ತಾವು ಸ್ವಯಂಪ್ರೇರಿತರಾಗಿ ತೆಗೆಯುವಂತೆ ಅರಣ್ಯ ಇಲಾಖೆ ಕೋರಿದೆ.
ಯಾರಾದರೂ ಕೂಲಿ ಕಾರ್ಮಿಕರು ಉರುಳು ಹಾಕುವ ಕೆಲಸಕ್ಕೆ ಕೈ ಹಾಕಿದರೆ ಅಂತಹವರ ವಿವರಗಳನ್ನು ಹತ್ತಿರದ ಅರಣ್ಯ ಇಲಾಖೆ ಕಚೇರಿ ಅಥವಾ ಸಿಬ್ಬಂದಿಯ ಗಮನಕ್ಕೆ ತರಬೇಕೆಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.