ಸೋಮವಾರಪೇಟೆ, ಡಿ.೨೧: ಕಾಫಿ ತೋಟದಿಂದ ಕಾಫಿ ಹಣ್ಣಿನ ಚೀಲಗಳನ್ನು ಜೀಪ್‌ನಲ್ಲಿ ತುಂಬಿಸಿಕೊAಡು ಮನೆಗೆ ತರುವ ಸಂದರ್ಭ ಜೀಪ್ ಮಗುಚಿ ಬೆಳೆಗಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ನಡೆದಿದೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ಕೇಳಗಾಮನೆ ಪರಮೇಶ್(೫೪) ಮೃತ ದುರ್ದೈವಿ. ತಮ್ಮ ತೋಟದಲ್ಲಿ ಕೊಯ್ಲು ಮಾಡಿದ ಕಾಫಿ ಹಣ್ಣನ್ನು ಚೀಲಗಳಲ್ಲಿ ತುಂಬಿಸಿಕೊAಡು ತಮ್ಮದೆ ಜೀಪ್‌ನಲ್ಲಿ ಮನೆಗೆ ತರುವ ಸಂದರ್ಭ ಅವಘಡ ಸಂಭವಿಸಿದೆ. ತೋಟದೊ ಳಗಿನ ಕಚ್ಚಾರಸ್ತೆಯಲ್ಲಿ ಚಲಿಸುವ ಸಂದರ್ಭ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಜೀಪ್ ಚಾಲನೆ ಮಾಡುತ್ತಿದ್ದ ಪರಮೇಶ್ ಅವರು ವಾಹನದ ಕೆಳಗೆ ಸಿಲುಕಿ ತೀವ್ರ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತರ ಅಂತ್ಯಕ್ರಿಯೆ ತಾ.೨೨ ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.