ಮಡಿಕೇರಿ, ಡಿ.೨೦; ರಾಜ್ಯದ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಸುಧಾರಣೆ ತರುವದು, ರಾಜ್ಯದ ಪ್ರಸಕ್ತ ವರ್ತಮಾನದ ಸ್ಥಿತಿಗತಿಯನ್ನು ಸರಿಪಡಿಸುವದು, ಸರಕಾರಿ ಉದ್ಯೋಗಗಳಿಗೆ ಶೀಘ್ರ ನೇಮಕಾತಿ ಮಾಡಿಕೊಳ್ಳುವದು, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಹಾಗೂ ನ್ಯಾಯಯುತ ಸಂಯೋಜನೆ ಮಾಡಿಕೊಳ್ಳುವದು ಸೇರಿದಂತೆ ನಾಲ್ಕು ನಿರ್ಣಯಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಾಂತ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ರಾಜ್ಯ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ. ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂವಾದ, ವಿಚಾರಗೋಷ್ಠಿ, ಸನ್ಮಾನ, ಮುಖ್ಯ ಭಾಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿವೆ. ಇದರೊಂದಿಗೆ ಪ್ರಮುಖ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಸುಧಾರಣೆ ತರುವದು, ಪ್ರಸಕ್ತ ವರ್ತಮಾನದ ಪರಿಸ್ಥಿತಿಯಲ್ಲಿ ಆಗಬೇಕಾಗಿರುವ ಕ್ರಮಗಳು, ಖಾಲಿ ಉಳಿದಿರುವ ಸರಕಾರಿ ಉದ್ಯೋಗಗಳಿಗೆ ಶೀಘ್ರ ನೇಮಕಾತಿ ಮಾಡಿಕೊಳ್ಳುವದು, ಹಾಗೂ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಹಾಗೂ ನ್ಯಾಯಯುತ ಸಂಯೋಜನೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿರ್ಣಯಗಳನ್ನು ಸರಕಾರಕ್ಕೆ ಕಳುಹಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವದು. ಪ್ರತಿ ಸಮ್ಮೇಳನದಲ್ಲೂ ನಿರ್ಣಯ ಕೈಗೊಳ್ಳಲಾಗುತ್ತಿದ್ದು ಪರಿಷತ್‌ನ ನಿರ್ಣಯಗಳಿಗೆ ಸರಕಾರದಿಂದಲೂ ಸೂಕ್ತ ಸ್ಪಂದನ ದೊರಕುತ್ತಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಗಂಧರ್ವ, ಕಾರ್ಯಕಾರಿಣಿ ಸಮಿತಿಯ ಪವನ್, ಕೌಶಲ್ಯ ಇದ್ದರು.