ಸೋಮವಾರಪೇಟೆ, ಡಿ. ೨೧: ರಾಜ್ಯ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನ. ೧೪ ರಿಂದ ಜ. ೨೪ ರವರೆಗೆ ೧೦ ವಾರಗಳ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಒಂದು ದಿನದ ಮಕ್ಕಳ ವಿಶೇಷ ಗ್ರಾಮಸಭೆ ನಡೆಸಲು ಸುತ್ತೋಲೆ ಹೊರಡಿಸಿದ್ದು, ತಾಲೂಕಿನ ೨೩ ಗ್ರಾ.ಪಂ.ಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಲಿದೆ ಎಂದು ನಾವು ಪರಿಷ್ಠಾನ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗು ಸಿಎಂಸಿಎ(ಚಿಲ್ಡçನ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್) ಯೋಜನೆ ರೂಪಿಸಿದೆ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಸಹಕಾರದಿಂದ ಯೋಜನೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿಗಳ ಕೊಡಗು ಉಸ್ತುವಾರಿಯನ್ನು ನಾವು ಪ್ರತಿಷ್ಠಾನ ಸಂಸ್ಥೆಗೆ ವಹಿಸಿರುವುದರಿಂದ ಸೋಮವಾರಪೇಟೆ ತಾಲ್ಲೂಕಿನ ೨೩ ಗ್ರಾಮ ಪಂಚಾಯಿತಿ ಪಿಡಿಓಗಳು ಮಕ್ಕಳ ಗ್ರಾಮಸಭೆಗೆ ಸಿದ್ಧತೆ ನಡೆಸಬೇಕೆಂದು ಮನವಿ ಮಾಡಿದರು.
ಕಳೆದ ಸಾಲಿನಲ್ಲಿ ನಡೆದ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಕೇವಲ ಶೇ.೧೮ರಷ್ಟು ಉತ್ತರ ಸಿಕ್ಕಿ ಪ್ರಗತಿಯಾಗಿದೆ. ಪ್ರಸಕ್ತ ಶೇ.೫೦ರಿಂದ ೬೦ ಪ್ರಗತಿ ಕಾಣಬೇಕಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಅವರು ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸುತ್ತೊಲೆಯನ್ನು ಕಳುಹಿಸಿದ್ದಾರೆ. ಕೆಲವು ಗ್ರಾಮ ಪಂಚಾಯಿತಿಯ ಪಿಡಿಓಗಳು ಸುತ್ತೊಲೆಯಂತೆ ಕೆಲಸ ಮಾಡುತ್ತಿಲ್ಲ ಎಂದು ಸುಮನ ಮ್ಯಾಥ್ಯೂ ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳ ಗ್ರಾಮಸಭೆಗೆ ವಿವಿಧ ಇಲಾಖಾಧಿಕಾರಿಗಳನ್ನು ಕರೆಸಬೇಕು. ಆದರೆ ಹೆಚ್ಚಿನ ಗ್ರಾಮಸಭೆಗಳಿಗೆ ಬಹುತೇಕ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವವರೇ ಇಲ್ಲದಂತಾಗಿದೆ. ಇದರಿಂದ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರುತ್ತಿದೆ ಎಂದು ಹೇಳಿದರು.
ಮಕ್ಕಳ ಗ್ರಾಮಸಭೆಗಳಿಗೆ ನಾವು ಪ್ರತಿಷ್ಠಾನದ ಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕಿದೆ. ಆದರೆ ಕೊಡ್ಲಿಪೇಟೆ, ಶನಿವಾರಸಂತೆ, ಬ್ಯಾಡಗೊಟ್ಟ, ಚೌಡ್ಲು, ಐಗೂರು ಗ್ರಾಮ ಪಂಚಾಯಿತಿಯ ಪಿಡಿಓಗಳು ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಮಕ್ಕಳ ಗ್ರಾಮಸಭೆ ನಡೆಸುವಂತೆ ನ. ೭ರಂದು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಸುತ್ತೊಲೆ ಹೊರಡಿಸಿದ್ದಾರೆ. ಆದರೆ ಸೋಮವಾರಪೇಟೆ ತಾಲೂಕಿನ ೨೩ ಗ್ರಾಮ ಪಂಚಾಯಿತಿಗಳ ಪೈಕಿ ಕೊಡ್ಲಿಪೇಟೆಯಲ್ಲಿ ಮಾತ್ರ ಗ್ರಾಮಸಭೆ ನಡೆದಿದೆ. ಉಳಿದ ಪಂಚಾಯಿತಿಗಳ ಪಿಡಿಓಗಳು ಸರ್ಕಾರದ ಸುತ್ತೋಲೆಗೆ ಯಾವುದೇ ಗೌರವ ನೀಡುತ್ತಿಲ್ಲ. ಜ.೨೪ ರ ಒಳಗೆ ಮಕ್ಕಳ ಗ್ರಾಮಸಭೆಗಳು ನಡೆದು, ಪಿಡಿಓಗಳು ಸರ್ಕಾರದ ತಂತ್ರಾAಶದ ಮೂಲಕ ಸಭೆಯ ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು. ತಪ್ಪಿದಲ್ಲಿ ಪಿಡಿಓಗಳ ವಿರುದ್ಧ ಪಂಚಾಯಿತಿ ರಾಜ್ ಇಲಾಖೆಯ ಆಯುಕ್ತರಿಗೆ ಲಿಖಿತ ದೂರು ನೀಡಿಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.
ಮಕ್ಕಳ ಬೇಡಿಕೆಗಳು ಸರ್ಕಾರಕ್ಕೆ ತಲುಪಿದ ನಂತರವೇ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಸರ್ಕಾರ ಅನುದಾನ ಕಲ್ಪಿಸುತ್ತದೆ. ನಾವು ಪ್ರತಿಷ್ಠಾನದ ಪ್ರತಿನಿಧಿಗಳು ೨೩ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಾರ್ಗದರ್ಶನ ಕಾರ್ಯಕ್ರಮ ಪೂರ್ಣಗೊಳಿಸಿದ್ದಾರೆ. ಮಕ್ಕಳ ಹಕ್ಕುಗಳ ಬಗ್ಗೆ ಹೇಳಿಕೊಡಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲ ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ಪ್ರತಿನಿಧಿಗಳಾದ ಸವಿತಾ, ರವಿಚಂದ್ರ ಇದ್ದರು.