ಸಿದ್ದಾಪುರ, ಡಿ. ೨೦: ಆಲೂಗೆಡ್ಡೆ ಸಾಗಾಟ ನೆಪದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಇಬ್ಬರು ಆರೋಪಿಯನ್ನು ಬಂಧಿಸಿ, ೧೦ ಗೋವುಗಳನ್ನು ರಕ್ಷಿಸಿದ್ದಾರೆ.

ಕೇರಳದ ಇರುಕ್ಕೂರು ನಿವಾಸಿ ಸಾದಿಕ್ (೩೬) ಹಾಗೂ ಅಹಮ್ಮದ್ (೩೪) ಬಂಧಿತ ಆರೋಪಿಗಳು. ತಾ. ೧೯ ರಂದು ಬೆಳಿಗ್ಗೆ ೯ ಗಂಟೆಗೆ ಕೊಡಗು-ಕೇರಳ ಗಡಿ ಭಾಗವಾದ ಪೆರುಂಬಾಡಿ ಚೆಕ್‌ಪೋಸ್ಟ್ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭ ಗೋಣಿಕೊಪ್ಪ ಕಡೆಯಿಂದ ಕೇರಳಕ್ಕೆ ತೆರಳುತ್ತಿದ್ದ ಈಚರ್ ವಾಹನ (ಕೆಎಲ್ ೭೮ ಡಿ ೫೮೭೦) ಪರಿಶೀಲಿಸಿದ ಸಂದರ್ಭ ಮೇಲ್ಭಾಗದಲ್ಲಿ ಆಲೂಗೆಡ್ಡೆ ಮೂಟೆ ತುಂಬಿರುವುದು ಕಂಡುಬAದಿದೆ. ಆದರೆ, ಕೆಳಭಾಗದಲ್ಲಿ ಜಾನುವಾರುಗಳು ಓಡಾಡುತ್ತಿರುವ ಹಾಗೂ ಕಿರುಚಾಡುತ್ತಿರುವ ಶಬ್ದ ಕೇಳಿ ಬಂದಿದೆ. ವಾಹನವನ್ನು ಪರಿಶೀಲಿಸಿದ ಸಂದ ರ್ಭ ಒಟ್ಟು ೧೦ ಜಾನುವಾರುಗಳು ಪತ್ತೆಯಾಗಿವೆ.

ಸಾಗಾಟಕ್ಕೆ ಯಾವುದೇ ಅನುಮತಿ ಪಡೆಯದೆ, ಸೂಕ್ತ ನೀರು, ಗಾಳಿ ವ್ಯವಸ್ಥೆ ಇಲ್ಲದ ರೀತಿಯಲ್ಲಿ ಪಿರಿಯಾಪಟ್ಟದಿಂದ ವಾಹನದಲ್ಲಿ ಜಾನುವಾರುಗಳನ್ನು ಹಿಂಸೆ ನೀಡುವ ರೀತಿಯಲ್ಲಿ ಕೇರಳದ ಖಾಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದು ವಿಚಾರಣೆ ಸಂದರ್ಭ ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಸಿಬ್ಬಂದಿ ಖಾದರ್ ನೀಡಿದ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ ಜಾನುವಾರುಗಳನ್ನು ಗೋಶಾಲೆಗೆ ಕೊಂಡೊಯ್ದು ರಕ್ಷಿಸಲಾಗಿದೆ.