ಪೊನ್ನಂಪೇಟೆ, ಡಿ. ೨೦: ಹಿಂದೂ ಜಾಗರಣಾ ವೇದಿಕೆ ಹಾಗೂ ಪರಿವರ್ತನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆ ಗೋಣಿಕೊಪ್ಪದ ಕಾವೇರಿ ಕಾಲೇಜು ಆವರಣಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿತು.

ಈ ಸಂದರ್ಭ ಕಾವೇರಿ ಕಾಲೇಜು ಎನ್ ಎಸ್ ಎಸ್ ವಿದ್ಯಾರ್ಥಿಗಳು, ಪೊನ್ನಂಪೇಟೆ ಅಪ್ಪಚ್ಚ ಕವಿ ಹಾಗೂ ಗೋಣಿಕೊಪ್ಪ ಲಯನ್ಸ್ ಶಾಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಡ್ರಗ್ಸ್ ಸೇವನೆಯು ನಮ್ಮ ಬದುಕಿನ ದಾರಿ ಹಾಗೂ ದಿಕ್ಕು ತಪ್ಪಿಸುತ್ತ ನಮ್ಮ ಜೀವನವನ್ನು ನಾಶ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಯಾವುದು ನಮಗೆ ಕೆಟ್ಟದು ಎಂದು ಮನಸ್ಸಿಗೆ ಅನಿಸುತ್ತದೋ ಅದನ್ನು ತ್ಯಜಿಸುವಂತ ಕೆಲಸ ಮಾಡಬೇಕು.

ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರೆ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯ ಮುಖ್ಯಸ್ಥ ಡಾ. ಅಮೃತ್ ನಾಣಯ್ಯ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಪರಿವರ್ತನಾ ಫಸ್ಟ್ ಪ್ರಚಾರಕ ಸಂದೇಶ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಅಭಿಯಾನದ ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಅಲ್ಲುಮಾಡ ಶರತ್, ಪೊನ್ನಂಪೇಟೆ ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್, ಪೊನ್ನಂಪೇಟೆ ತಾಲೂಕು ಸಹ ಸಂಯೋಜಕ ಸುಕೇಶ್ ಕಾರ್ಯಪ್ಪ, ಪೊನ್ನಂಪೇಟೆ ನಗರ ಸಂಚಾಲಕ ಅನಿಲ್ ಪ್ರಸಾದ್, ಕರ್ನಾಟಕ ರಾಜ್ಯ ಸಹ ಸಂಯೋಜಕ ಐನಂಡ ಲಾಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಸಂಚಾಲಕ ಚೆಕ್ಕೆರ ಮನು ಕಾವೇರಪ್ಪ, ಪೊನ್ನಿಮಾಡ ಜಯಂತ್, ಜೀವನ್, ಚಿರಿಯಪಂಡ ಜೋಯಪ್ಪ, ಆಲೆಮಾಡ ಸುಧೀರ್, ಪದ್ಮನಾಭ, ದಿನೇಶ್, ಕಾವೇರಿ ಕಾಲೇಜು ಎನ್‌ಎಸ್‌ಎಸ್ ಅಧಿಕಾರಿ ಪುತ್ತಾಮನೆ ಪೂಜಾ ಶರಣು ಹಾಗೂ ಕಾರ್ಯಕರ್ತರು ಹಾಜರಿದ್ದರು.