ಕಣಿವೆ, ಡಿ. ೨೧: ಕುಶಾಲನಗರ ಪುರಸಭೆ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ ಎರಡು ಮೇಕೆಗಳು ಬಲಿಯಾದ ಘಟನೆ ನಡೆದಿದೆ. ಅಮರನಾಥ್ ಬಡಾವಣೆಯ ನಿವಾಸಿ ಪುಟ್ಟರಾಜು ಎಂಬವರಿಗೆ ಸೇರಿದ ಮೇಕೆಗಳು ಬೀದಿನಾಯಿಗಳ ದಾಳಿಗೆ ಬಲಿಯಾಗಿವೆ. ಇವುಗಳು ಮೇಯುತ್ತಿದ್ದ ವೇಳೆ ಬೀದಿನಾಯಿಗಳು ದಾಳಿ ನಡೆಸಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ಸ್ಥಳದಲ್ಲಿದ್ದವರು ಬೀದಿ ನಾಯಿಗಳಿಂದ ಮೇಕೆಯನ್ನು ರಕ್ಷಿಸಲು ಮುಂದಾಗಿದ್ದು, ಪ್ರಯತ್ನ ವಿಫಲವಾಗಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುರಸಭೆ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸುವಂತೆ ಪಂಚಾಯಿತಿ ಸದಸ್ಯ ಷಂಶುದ್ದೀನ್ ಆಗ್ರಹಿಸಿದ್ದಾರೆ.