ಸಿದ್ದಾಪುರ, ಡಿ. ೨೧: ಸಿದ್ದಾಪುರದ ಸಂಜೀವಿನಿ ಒಕ್ಕೂಟದ ವತಿಯಿಂದ ಸಿದ್ದಾಪುರದ ಅಮೃತ ಕೆರೆಗೆ ಹತ್ತು ಸಾವಿರ ಮೀನು ಮರಿಗಳನ್ನು ಬಿಡಲಾಯಿತು. ಸಿದ್ದಾಪುರದ ವೀರಾಜಪೇಟೆ ರಸ್ತೆಯ ಶ್ರೀ ಅಯ್ಯಪ್ಪ ದೇವಾಲಯ ಸಮೀಪವಿರುವ ಪಂಚಾಯಿತಿಗೆ ಸೇರಿದ ಅಮೃತಕೆರೆಗೆ ವೀರಾಜಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಅವರು ಸರಕಾರದ ವತಿಯಿಂದ ನೀಡಿದ ಮೀನು ಮರಿಗಳನ್ನು ಬಿಡಲಾಯಿತು.
ಈ ಸಂದರ್ಭ ಮಾತನಾಡಿದ ಸಂಜೀವಿನಿ ಒಕ್ಕೂಟದ ಎಂ.ಎ. ಯಮುನಾ ಮಾತನಾಡಿ ಸಂಜೀವಿನಿ ಒಕ್ಕೂಟದ ವತಿಯಿಂದ ಈಗಾಗಲೇ ಒಕ್ಕೂಟದ ಸದಸ್ಯರಿಗೆ ಸ್ವಯಂ ಉದ್ಯೋಗದ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಒಕ್ಕೂಟದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಇದೀಗ ವೀರಾಜಪೇಟೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಅವರು ಒಕ್ಕೂಟಕ್ಕೆ ಮೀನು ಸಾಕಾಣಿಕೆ ಮಾಡುವ ನಿಟ್ಟಿನಲ್ಲಿ ಮೀನು ಮರಿಗಳನ್ನು ನೀಡಿದ್ದು ಇದರ ಪೋಷಣೆಯನ್ನು ಸಂಜೀವಿನಿ ಒಕ್ಕೂಟವು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ, ಸದಸ್ಯರುಗಳಾದ ಜಾಫರ್ ಅಲಿ, ಸೇಮಿರ, ತುಳಸಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಟಿ.ಕೆ. ವಸಂತಿ, ಸುಮತಿ, ಜಮೀರ ಇನ್ನಿತರರು ಹಾಜರಿದ್ದರು.