ಕುಶಾಲನಗರ, ಡಿ. ೨೧: ಪ್ರತಿ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಹಾಗೂ ಶಿಕ್ಷೆಗೆ ಗುರಿಯಾಗುವುದಿಲ್ಲ ಎಂದು ಶಪಥ ಮಾಡಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇಂದು ಅತ್ಯಗತ್ಯ ಎಂದು ಪೊಲೀಸ್ ಅಧಿಕಾರಿಯೂ ಆಗಿರುವ ಭಾರತಮಾತಾ ಶಾಲೆಯ ಹಳೆಯ ವಿದ್ಯಾರ್ಥಿ ಬಿ.ಆರ್. ಪ್ರದೀಪ್ ಕುಮಾರ್ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕರೆ ಕೊಟ್ಟರು.
ಕೊಪ್ಪದ ಭಾರತ ಮಾತಾ ವಿದ್ಯಾಸಂಸ್ಥೆಯ ೫೦ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಶಾಲೆ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪೋಷಕರಿಗಿಂತ ಹೆಚ್ಚಾಗಿ ಇಂದಿನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಾನೂನಿನ ಅರಿವನ್ನು ಬಹಳ ಮುಖ್ಯವಾಗಿ ಹೊಂದಬೇಕಿದೆ.
ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಇಂದು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಬಹಳ ಏಕಾಗ್ರತೆ ಹಾಗೂ ಪರಿಶ್ರಮದಿಂದ ಪೂರ್ಣಗೊಳಿಸಿದಲ್ಲಿ ಅವರ ಜೀವನ ಉಜ್ವಲವಾಗುತ್ತದೆ.
ಇಂದು ಪ್ರತಿಯೊಬ್ಬರು ಶುದ್ಧ ಗಾಳಿ, ಶುದ್ಧ ನೀರು ಹಾಗೂ ಶುದ್ಧ ಮಣ್ಣು ಇರುವಂತಹ ಸುಂದರ ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
ಕೊಡಗು ಸೈನಿಕ ಶಾಲಾ ಪ್ರಾಂಶುಪಾಲ ಅಮರ ಜೀತ್ ಸಿಂಗ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಪೈಪೋಟಿಗಳನ್ನು ಸಮರ್ಥವಾಗಿ ನಿಭಾಯಿಸಲು ಹೆಚ್ಚು ಹೆಚ್ಚು ಜ್ಞಾನವಂತರಾಗಬೇಕೆAದು ಕರೆಕೊಟ್ಟರು.
ರೈತಾಪಿಗಳು ಹೆಚ್ಚಾಗಿ ಇರುವ ಕೊಪ್ಪ ಎಂಬ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಹಿರಿಯರು ಕಟ್ಟಿದ ವಿದ್ಯಾಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಇದರ ಹಿಂದಿನ ಎಲ್ಲಾ ಶ್ರಮಿಕರಿಗೆ ಹಾಗೂ ಪೋಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಗಸ್ಟಿನ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್ ಕುಮಾರ್, ಬೈಲುಕೊಪ್ಪ ಠಾಣೆಯ ವೃತ್ತ ನಿರೀಕ್ಷಕ ಎಂ.ಕೆ. ದೀಪಕ್, ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾ. ಸಿಬಿಚನ್ ಪೌಲ್, ಬೈಲುಕೊಪ್ಪ ಭೌದ್ಧ ಸೇವಾ ಸಮಿತಿ ಅಧ್ಯಕ್ಷ ಕರ್ಮರಿನ್ ಪೂಂಚೆ, ಬೈಲುಕೊಪ್ಪ ಠಾಣಾಧಿಕಾರಿ ರವಿಕುಮಾರ್, ಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಗೀತಾ ಇದ್ದರು. ಸಿಆರ್ಪಿ ಮುಬೀನಾ ಇದ್ದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಸ್ವಾಗತ ನೃತ್ಯ ನೆರವೇರಿತು. ಭಾರತ ಮಾತಾ ಪಿಯು ಕಾಲೇಜು ವಿಭಾಗದ ಕನ್ನಡ ಉಪನ್ಯಾಸಕ ಕೆ. ಜ್ಞಾನೇಶ್ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀದೇವಿ ನಿರೂಪಿಸಿದರು. ಶಿಕ್ಷಕ ಮೊಹಮ್ಮದ್ ರಫಿ ವಂದಿಸಿದರು.