ಸಿದ್ದಾಪುರ, ಡಿ. ೨೧: ವನ್ಯ ಪ್ರಾಣಿಗಳ ಹಾವಳಿಯನ್ನು ತಡೆ ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ಪಶು ವೈದ್ಯರನ್ನು ಹಾಗೂ ಸರ್ಕಾರಿ ಆಸ್ಪತ್ರೆಗೆ ವೈದ್ಯರುಗಳನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಕಚೇರಿಯ ಮುಂಭಾಗದ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಆಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಇದರೊಂದಿಗೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿಯ ಉಪಟಳದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೆ ಮಂಗಗಳ ಹಾವಳಿಯು ಉಲ್ಭಣಿಸಿದೆ. ಮಂಗಗಳು ಮನೆಗಳ ಒಳಗೆ ನುಗ್ಗಿ ದಾಂಧಲೆ ನಡೆಸುತ್ತಿದೆ. ಕಾಫಿ ಹಣ್ಣುಗಳನ್ನು ತಿಂದು ನಾಶಗೊಳಿಸುತ್ತಿದೆ ಎಂದು ದೂರಿದರು.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ತಿತಿಮತಿ ವಲಯ ಉಪವಲಯ ಅರಣ್ಯ ಅಧಿಕಾರಿ ಶಶಿ ಮಾತನಾಡಿ, ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿಯ ಉಪಟಳ ಇರುವ ಹಿನ್ನೆಲೆಯಲ್ಲಿ ಆ ಭಾಗದ ಕಾಫಿ ತೋಟದಲ್ಲಿ ಬೋನ್ ಇರಿಸಲಾಗಿದೆ ಎಂದರು. ಮಂಗಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಚಿನ್ನಮ್ಮ ಮಾತನಾಡಿ, ಮಾಲ್ದಾರೆ ಗ್ರಾಮದಲ್ಲಿ ಕಳೆದ ಐದು ವರ್ಷಗಳ ಹಿಂದೆ ನೂತನ ಕಟ್ಟಡವನ್ನು ನಿರ್ಮಿಸಿ ಪಶುವೈದ್ಯ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆದರೆ, ಇದೀಗ ವೈದ್ಯರಿಲ್ಲದೆ ಇಲ್ಲದೆ ಕಟ್ಟಡ ಪಾಳುಬಿದ್ದಿದೆ. ಪರಿಣಾಮ ಸಿದ್ದಾಪುರಕ್ಕೆ ಪ್ರಾಣಿಗಳನ್ನು ಚಿಕಿತ್ಸೆಗಾಗಿ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಮಾಲ್ದಾರೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಅಜ್ಜಿನಿಕಂಡ ರಘು ಕರುಂಬಯ್ಯ ಮಾತನಾಡಿ, ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಸಮರ್ಪಕವಾಗಿ ನಡೆದಿರುವುದಿಲ್ಲ. ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆಯಿಂದಾಗಿ ಬಹುತೇಕ ಮೂಲಭೂತ ಸೌಕರ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕುಂಞಣ್ಣ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಂಬAಧಪಟ್ಟ ಇಲಾಖೆಗಳು ಸ್ಥಳಕ್ಕೆ ಭೇಟಿ ನೀಡಿ ಅಳವಡಿಸಿ ನೀರಿನ ಸೌಕರ್ಯವನ್ನು ಕಲ್ಪಿಸಬೇಕೆಂದು ಸೂಚಿಸಿದರು.
ಮಾಲ್ದಾರೆ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ಆಟವಾಡಲು ಸೂಕ್ತವಾದ ಮೈದಾನವಿಲ್ಲ. ಇರುವ ಮೈದಾನವು ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದು, ಇಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಮಾತನಾಡಿ, ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಕಾಲೇಜುಗಳು ಇಲ್ಲದ ಹಿನ್ನೆಲೆಯಲ್ಲಿ ಈ ಭಾಗದ ಮಕ್ಕಳು ಪದವಿ ಪೂರ್ವ ಶಿಕ್ಷಣಕ್ಕಾಗಿ ದೂರದ ಊರಿಗೆ ತೆರಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಈ ಭಾಗಕ್ಕೆ ಒಂದು ಕಾಲೇಜನ್ನು ಪ್ರಾರಂಭಿಸಬೇಕೆAದು ಒತ್ತಾಯಿಸಿದರು.
ಗ್ರಾಮ ಸಭೆಯಲ್ಲಿ ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕಿ ಸೀಮಾ ಕುಮಾರಿ ಮಾತನಾಡಿ, ಪಡಿತರ ಚೀಟಿಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಸಿಬ್ಬಂದಿಗಳು ಹಾಜರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಸ್ವಾಗತಿಸಿ, ವಂದಿಸಿದರು.