ಮಡಿಕೇರಿ, ಡಿ. ೨೧: ನ್ಯಾಯಾಲಯದ ಆದೇಶ ಪಾಲನೆ ಯೊಂದಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಸೌಹಾರ್ದ ಯುತವಾಗಿ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದರು.
ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ತಾ. ೨೩ರಿಂದ ೨೮ರ ತನಕ ನಡೆಯಲಿರುವ ಜಾತ್ರ ಮಹೋತ್ಸವ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ದೇವಾಲಯ ಆವರಣದಲ್ಲಿ ಶಾಂತಿ ಸಭೆ ನಡೆಯಿತು. ಕಳೆದ ವರ್ಷ ಉತ್ಸವದ ಸಂದರ್ಭ ವಸ್ತç ಸಂಹಿತೆ ವಿಚಾರದಲ್ಲಿ ನಡೆದ ಘರ್ಷಣೆ ಹಿನ್ನೆಲೆ ಜಿಲ್ಲಾಡಳಿತದಿಂದ ಸಭೆ ನಡೆಯಿತು.
ನ್ಯಾಯಾಲಯ ಆದೇಶ ಉಲ್ಲಂಘನೆಯಾಗದ ರೀತಿಯಲ್ಲಿ ಆಚರಣೆ ನಡೆಯಬೇಕು. ಯಾವುದೇ ರೀತಿಯಲ್ಲಿ ಗೊಂದಲ ಸೃಷ್ಟಿಯಾಗಬಾರದು. ಭಾವನೆಗಳಿಗೆ ಧಕ್ಕೆಯಾಗಬಾರದು. ಇದರ ಜವಾಬ್ದಾರಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ಮೇಲಿದೆ. ಉತ್ತಮ ರೀತಿಯಲ್ಲಿ ಉತ್ಸವ ನಡೆಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ನ್ಯಾಯಾಲಯದ ಆದೇಶ ಪಾಲನೆ ಮಾಡುವುದು
೪ಆರನೇ ಪುಟಕ್ಕೆ
ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಂತಿ ರೀತಿಯಲ್ಲಿ ಗ್ರಾಮಸ್ಥರು ಮುಂದುವರೆಯಬೇಕು. ಪ್ರತಿವರ್ಷ ಶಾಂತಿಯುತವಾಗಿ ಉತ್ಸವ ಆಚರಣೆಯಾಗುವಂತಾಗಬೇಕು. ಜನರ ನಿಯಂತ್ರಣದಲ್ಲಿ ತಪ್ಪಾಗಬಾರದು. ಮುಂದಿನ ಪೀಳಿಗೆಯ ದೃಷ್ಟಿಯಲ್ಲಿ ಹಿರಿಯರು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಸಾಮರಸ್ಯದ ಸಂದೇಶ ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮನ್ವಯತೆ ಹಾಗೂ ಸೌಹಾರ್ದತೆಯಿಂದ ವಾರ್ಷಿಕೋತ್ಸವ ಆಚರಿಸಬೇಕು. ಈ ಬಾರಿ ಯಾವುದೇ ಗೊಂದಲಗಳಿಗೆ ಅಸ್ಪದ ನೀಡಬಾರದು. ಎಲ್ಲರೂ ಜೊತೆಯಾಗಿ ಆಚರಣೆಯಲ್ಲಿ ಭಾಗಿಯಾಗಬೇಕು. ದೇವಾಲಯ ಇರುವುದು ಒಂದಾಗಿರಲು. ಇದನ್ನು ಅರಿತು ಮುನ್ನಡೆಯಬೇಕು. ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಉತ್ಸವ ಸಂದರ್ಭ ಪೊಲೀಸ್ ಇಲಾಖೆ ಸೂಕ್ತ ಎಚ್ಚರಿಕೆ ವಹಿಸಲಿದೆ. ಯಾರು ಕೂಡ ಅಸಮಾಧಾನಗಳಿಗೆ ಎಡೆಮಾಡಿಕೊಡಬಾರದು. ಸಕಾರಾತ್ಮಕ ಚಿಂತನೆ ಮೂಲಕ ದೇವಾಲಯ ಹಾಗೂ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಕಾನೂನಿಗೆ ಬೆಲೆ ನೀಡುವಂತೆ ಕೋರಿದರು.
ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಜನಾರ್ಧನ್ ಮಾತನಾಡಿ, ನ್ಯಾಯಾಲಯದ ಆದೇಶದಂತೆ ತಮ್ಮ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಬರಲು ಅಭ್ಯಂತರವಿಲ್ಲ. ಆದೇಶ ಉಲ್ಲಂಘಿಸುವ ಅಧಿಕಾರ ಅಧಿಕಾರಿಗಳಿಗಾಗಲಿ, ನಮಗಾಗಲಿ ಇಲ್ಲ. ನಾವೆಲ್ಲ ಸಮನ್ವಯತೆಯಿಂದ ಯಾವುದೇ ಗೊಂದಲಕ್ಕೆ ಕಾರಣವಾಗದೆ ಉತ್ಸವ ಆಚರಿಸಬೇಕು. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ತಿಳಿಸಿದ ಅವರು, ನೂಕುನುಗ್ಗಲು ಏರ್ಪಡುವ ಕಾರಣದಿಂದ ಒಳಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಮಡಿಕೇರಿ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.