ಗೋಣಿಕೊಪ್ಪಲು, ಡಿ. ೨೧: ಕೊಡಗು ಜಿಲ್ಲೆಯ ಜಮ್ಮಾ ಭೂಮಿಗಳ ವಿಚಾರದಲ್ಲಿ ಕಂದಾಯ ಕಾನೂನು ವ್ಯವಸ್ಥೆಯಲ್ಲಿ ಏರ್ಪಟ್ಟಿದ್ದ ಸಮಸ್ಯೆಯನ್ನು ಕಾನೂನಿನಲ್ಲಿ ತಿದ್ದುಪಡಿ ವಿಧೇಯಕ ಮೂಲಕ ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದರು.

ಬೆಳಗಾವಿ ಅಧಿವೇಶನ ಮುಗಿಸಿ ಜಿಲ್ಲೆಗೆ ಆಗಮಿಸಿದ ಶಾಸಕರನ್ನು ಗಡಿಭಾಗ ಆನೆಚೌಕೂರಿನಲ್ಲಿ ಸ್ವಾಗತಿಸಿಕೊಂಡ ಕಾರ್ಯಕರ್ತರು ಸನ್ಮಾನಿಸಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ,್ಣ ವಿಧಾನ ಮಂಡಲದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೂಡ ಈ ಮಸೂದೆಗೆ ಬೆಂಬಲವನ್ನು ಸೂಚಿಸಿದರು. ವಿರೋಧ ಪಕ್ಷದ ನಾಯಕರು, ಮಾಜಿ ಗೃಹ ಸಚಿವರು ಕೂಡ ಈ ಮಸೂದೆಯನ್ನು ಸ್ವಾಗತಿಸಿದರು. ಆದರೆ, ಕೊಡಗಿನ ವಿರೋಧ ಪಕ್ಷ ಮುಖಂಡರು ಇದನ್ನು ಸ್ವಾಗತಿಸುವ ಬದಲು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದರು ಎಂದು ಟೀಕಿಸಿದರು. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೈಜೋಡಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪಕ್ಷದ ಮುಖಂಡರಾದ ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ, ವಿ.ಟಿ.ವಾಸು, ಎ.ಜೆ.ಬಾಬು, ಆಲೀರ ರಶೀದ್, ಎರ್ಮುಹಾಜಿ, ಪ್ರಮೋದ್ ಗಣಪತಿ, ಎಂ.ಮAಜುಳ, ನೂರೇರ ಧನ್ಯ ರವೀಂದ್ರ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.