ಮಡಿಕೇರಿ, ಡಿ. ೨೩: ಮಡಿಕೇರಿಯಿಂದ ಕತ್ತಲೆಕಾಡಿಗಾಗಿ ಕಟ್ಟೆಮಾಡಿಗೆ ತೆರಳುವ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿ ತಾ.೨೬ರಂದು ಮರಗೋಡಿನಲ್ಲಿ ರಸ್ತೆತಡೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮರಗೋಡಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಂದಕುಮಾರ್ ತಿಳಿಸಿದರು.
ಮಡಿಕೇರಿಯಿಂದ ಕತ್ತಲೆಕಾಡು, ಹುಲಿತಾಳ, ಮರಗೋಡು, ಕಟ್ಟೆಮಾಡು, ಕೊಂಡAಗೇರಿಯ ಸುಮಾರು ೨೩ ಕಿಮಿ ಪಿಡಬ್ಲ್ಯೂ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಸಂಚಾರಕ್ಕೆ ಯೋಗ್ಯವಾಗಿಲ್ಲ. ಸರ್ಕಾರಿ ಬಸ್ ಬೆಳಗ್ಗೆ ಮತ್ತು ಸಂಜೆ ಮಾತ್ರ ಆಗಮಿಸುತ್ತದೆ. ಉಳಿದಂತೆ ಇಲ್ಲಿನ ಗ್ರಾಮಸ್ಥರ ಸಂಚಾರ ಆಟೋ ಮತ್ತು ಸ್ವಂತ ವಾಹನಗಳ ಮೂಲಕವಾಗಿದೆ. ಆದರೆ, ಸಂಚಾರ ಮಾತ್ರ ದುಸ್ತರವಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ತಾ.೨೬ರಂದು ಹುಲಿತಾಳ, ಮರಗೋಡು, ಕಟ್ಟೆಮಾಡು, ಕೊಂಡAಗೇರಿಯ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ನವನೀತ್ ಮಾತನಾಡಿ, ಸುಮಾರು ೧೫-೨೦ ವರ್ಷಗಳ ಹಿಂದೆ ರಸ್ತೆ ದುರಸ್ತಿಗೊಳಿಸಲಾಗಿತ್ತು. ಆ ನಂತರ ತೇಪೆಕಾರ್ಯ ಮಾಡಲಾಗಿದೆ. ಇಂದು ಸಂಚಾರ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಮುಂಬರುವ ಚುನಾವಣೆಗೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಹಿಂದೆ ೨ ಬಾರಿ ರಸ್ತೆ ದುರಸ್ತಿಗೆ ಭೂಮಿ ಪೂಜೆ ಮಾಡಲಾಗಿದೆ. ಇದರೊಂದಿಗೆ ಇತ್ತೀಚೆಗೆ ಶಿವಪಾರ್ವತಿ ದೇವಸ್ಥಾನ ಸಮೀಪ ಎರಡು ಮೋರಿಗಳನ್ನು ಹಾಕಲಾಗಿದೆ. ಆದರೆ, ರಸ್ತೆ ಮಾತ್ರ ದುರಸ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ತೇಪೆಕಾರ್ಯ ಬೇಡ. ಸಂಪೂರ್ಣ ರಸ್ತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಬಡುವಂಡ್ರ ಪ್ರದೀಪ್, ಖಜಾಂಚಿ ರಂಜು, ಗ್ರಾಮಸ್ಥರಾದ ತೊಂಡೀರ ಕೌಶಿಕ್, ಎಚ್.ಎಂ.ಈಶ್ವರ್ ಉಪಸ್ಥಿತರಿದ್ದರು.