ನಾಪೋಕ್ಲು, ಡಿ. ೨೩ : ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನ ಸಭಾ ಮಾಜಿ ಅಧ್ಯಕ್ಷರೂ ಶಾಸಕರು ಆಗಿದ್ದ ಕೊಂಬಾರನ ಜಿ. ಬೋಪಯ್ಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಗೇರಿ ವಲಯದ ವತಿಯಿಂದ ಮೇಕೇರಿ ಗೌರಿ ಶಂಕರ ದೇವಾಲಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ೧೫೦೦ ಹೊಸ ಸದಸ್ಯರ ಸೇರ್ಪಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸದೃಢ ಸÀಮಾಜವಾಗಬೇಕಾದರೆ ಎಲ್ಲರ ಸಹಕಾರ ಅವಶ್ಯಕ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗುತ್ತಿರುವ ಜನಪರ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಜನರು ಸದೃಢರಾಗಲು ಸಹಕಾರಿಯಾಗಿದೆ, ಕೊಡಗಿನ ಸಂಪಾಜೆಯಲ್ಲಿ ಪ್ರಾರಂಭಗೊAಡಾಗ ತಾನೇ ಚಾಲನೆ ನೀಡಿದ್ದೆ, ಅಲ್ಲಿಂದ ಸಂಘಟನೆಯ ಜೊತೆಗೆ ಸಂಪರ್ಕ ನಿರಂತರ ಎಂದು ಮೇಲುಕು ಹಾಕಿದ ಅವರು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕೆAದು ಯೋಜನೆಯ ಬಗ್ಗೆ ಬೆಳಕು ಚೆಲ್ಲಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಗೌರಿ ಶಂಕರ ದೇವಾಲಯದ ಕಾರ್ಯದರ್ಶಿ ಲೋಕೇಶ್ ಟಿ.ವಿ. ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಕೊಡಗು ಬಹಳ ಪ್ರಸಿದ್ಧ ವಾದಂತಹದ್ದು; ಇಲ್ಲಿಯ ಸಂಸ್ಕೃತಿ ವಿಶೇಷ, ಇಲ್ಲಿಯ ಪ್ರಕೃತಿ ವಿಶೇಷ ಬಹಳ ದೊಡ್ಡ ಮಟ್ಟದಲ್ಲಿ ಸೈನಿಕರನ್ನು ಕೊಟ್ಟ ಪ್ರದೇಶ ಕೊಡಗು ಎಂಬುದು ಒಂದು ಹೆಮ್ಮೆ. ಅಂತಹ ಒಂದು ನಾಡಿನಲ್ಲಿ ನಾವಿದ್ದೇವೆ, ನಮ್ಮ ಬದುಕಿನ ಜೊತೆಗೆ ನಮ್ಮ ಊರಿನ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸಿ ಹೇಳುವ ಅಗತ್ಯವಿದೆ. ಧರ್ಮದಿಂದ ಕೂಡಿದ ಪ್ರಗತಿ ಮಾತ್ರ ಶಾಶ್ವತವಾಗಿರುತ್ತದೆ. ಸ್ವಾಭಿಮಾನದ ಬದುಕನ್ನು ನಡೆಸಲು, ಸಂಸ್ಕಾರವನ್ನು ಹೆಚ್ಚಿಸಿಕೊಳ್ಳಲು ಇಂತಹ ಪೂಜಾ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತದೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬೆಳ್ಯನ ಚಂದ್ರ ಪ್ರಕಾಶ ಯೋಜನೆಯ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಗೌರಿ ಶಂಕರ ದೇವಾಲಯದ ಅಧ್ಯಕ್ಷ ಕೆ.ಕೆ. ಪೂರ್ಣಯ್ಯ, ಉಪಾಧ್ಯಕ್ಷÀ ಕೆ.ಆರ್. ಬೆಳ್ಯಪ್ಪ, ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಸುಶೀಲ, ಪ್ರಗತಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ, ಗಣೇಶ ಸೇವಾ ಸಮಿತಿಯ ಗೌರವಧ್ಯಕ್ಷ ಕುಮಾರ್ ಟಿ.ಎ., ಸ್ವಾಗತ್ ಯುವಕ ಸಂಘದ ಅಧ್ಯಕ್ಷ ಉಮೇಶ್ ಟಿ., ಬಂಧು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ನಳಿನಿ ಎನ್., ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ಯೋಜನೆಯ ವಿವಿಧ ಕಾರ್ಯಕ್ರಮಗಳ ಮಂಜೂರಾತಿ ಪತ್ರ ಹಾಗೂ ಸಲಕರಣೆಗಳನ್ನು ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಯಂತಿ ಪ್ರಾರ್ಥಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ ಸ್ವಾಗತಿಸಿದರು, ಮೇಲ್ವಿಚಾರಕಿ ವಿನೋದ ನಿರೂಪಿಸಿ, ಮೇಲ್ವಿಚಾರಕಿ ವಿದ್ಯಾ ವಂದಿಸಿದರು.

-ದುಗ್ಗಳ ಸದಾನಂದ.