- ಅನಿಲ್ ಹೆಚ್.ಟಿ.

ಬಾಳೆಹೊನ್ನೂರು, ಡಿ.೨೩: ಕಾಡಿನಿಂದ ನಾಡಿಗೆ ಆನೆ ಸೇರಿದಂತೆ ವನ್ಯಜೀವಿಗಳು ಬಂದು ದಾಂಧಲೆ ನಡೆಸುವಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕತೆಯ ಕೊರತೆಯೂ ಬಹು ಮುಖ್ಯ ಕಾರಣವಾಗಿದೆ ಎಂದು ಹೆಸರಾಂತ ವನ್ಯಜೀವಿ ಸಂಶೋಧಕ ಡಾ. ಸುರೇಂದ್ರ ವರ್ಮಾ ಮಾಹಿತಿ ನೀಡಿದ್ದಾರೆ.

ಬಾಳೆಹೊನ್ನೂರಿನ ರಾಷ್ಟಿçÃಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದ ಮೂರನೇ ದಿನದ ವಿಚಾರಗೋಷ್ಠಿಯಲ್ಲಿ ತಾ.೨೨ ರಂದು ಮಾನವ-ವನ್ಯಜೀವಿ ಸಂಘರ್ಷ ವಿಚಾರ ಸಂಬAಧ ಮಾತನಾಡಿದ ಸುರೇಂದ್ರ ವರ್ಮಾ, ಕಾಡಿನಲ್ಲಿ ಅಂದಾಜು ೩೨೦ ವಿಧದ ಸಸ್ಯಗಳು ಜೀವಿಗಳಿಗೆ ಆಹಾರವಾಗಿವೆೆ. ನಾಡಿನಲ್ಲಿ ಇಷ್ಟೊಂದು ವೈವಿಧ್ಯಮಯ ಆಹಾರ ದೊರಕದೇ ಹೋದಾಗ ತ್ಯಾಜ್ಯವೇ ಕಾಡು ಜೀವಿಗಳಿಗೆ ತಿನಿಸಾಗಿ ಪರಿಣಮಿಸುತ್ತದೆ. ಹಳ್ಳಿ, ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕೋಳಿ ಮಾಂಸ ಸೇರಿದಂತೆ ವಿವಿಧ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಕಾಡಿನಿಂದ ನಾಡಿಗೆ ಬಂದ ವನ್ಯಜೀವಿಗಳಿಗೆ ಇಂಥ ತ್ಯಾಜ್ಯ ಸುಲಭವಾಗಿ ಆಹಾರವಾಗುತ್ತ ಈ ಆಹಾರ ತಿಂದು ಮರಳಿ ಅರಣ್ಯಕ್ಕೆ ಹೋಗುವಲ್ಲಿ ಕಾಡು ಪ್ರಾಣಿಗಳು ನಿರಾಸಕ್ತಿ ತೋರುತ್ತಿವೆ. ನಾಡಿನಲ್ಲಿ ತ್ಯಾಜ್ಯ ತಿಂದು ಜೀವಿಸುವ ಇಲಿಗಳು ಹೆಬ್ಬಾವಿಗೆ ಆಹಾರವಾಗಿದ್ದರೆ, ನಾಯಿಗಳ ಬೇಟೆಗೆ ಚಿರತೆಗಳು ನಾಡಿಗೆ ನುಗ್ಗುತ್ತವೆ. ತ್ಯಾಜ್ಯವನ್ನೂ ಕಾಡಾನೆಗಳು ಆಹಾರವಾಗಿಸಿಕೊಂಡಿರುವ ಉದಾಹರಣೆಗಳಿವೆ ಎಂದರು. ಮಾನವ - ವನ್ಯಜೀವಿ ಸಂಘರ್ಷ ಎಂಬುದಕ್ಕಿAತ ವನ್ಯಜೀವಿಗಳಿಗೆ ಮಾನವನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಯಾಕೆ ಇನ್ನೂ ಗಂಭೀರವಾಗಿ ಗಮನ ನೀಡಿಲ್ಲ ಎಂದೂ ವರ್ಮಾ ಪ್ರಶ್ನಿಸಿದರು.

ದೇಶದ ೨೩ ರಾಜ್ಯದಲ್ಲಿ ವನ್ಯಜೀವಿ ದಾಂಧಲೆ ಗಂಬೀರ ಸಮಸ್ಯೆಯಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂದರ್ಭ ವನ್ಯಜೀವಿಗಳ ಜೀವನ ಕ್ರಮದ ಬಗ್ಗೆ ಸೂಕ್ತ ಮಾಹಿತಿ ತಿಳಿದುಕೊಂಡದ್ದೇ ಆದಲ್ಲಿ ಸಮಸ್ಯೆಯ ಮೂಲದ ಅರಿವಾಗುತ್ತದೆ. ಆದರೆ ಈವರೆಗೂ ಅಂಥ ಪ್ರಯತ್ನ ಸರ್ಕಾರಗಳಿಂದ ನಡೆದಿಲ್ಲ ಎಂದು ವರ್ಮಾ ವಿಷಾಧಿಸಿದರು.

ಕೊಡಗು ಜಿಲ್ಲೆಯೊಂದರಲ್ಲಿಯೇ ವಾರ್ಷಿಕ ೧.೪೦ ಲಕ್ಷ ಹಲಸಿನ ಹಣ್ಣು ಫಸಲು ಬಿಡುತ್ತಿದ್ದು, ಈ ಪೈಕಿ ಬಹುತೇಕ ಹಲಸನ್ನು ಕಾಡಿನಂಚಿನಲ್ಲಿ ಬಿಸಾಡಲಾಗುತ್ತಿದೆ. ಹೀಗಾಗಿ ಹಲಸು ಅರಸಿ ನಾಡಿಗೆ ಆನೆಗಳು ಬರುತ್ತಿವೆ ಎಂದೂ ವರ್ಮಾ ಪ್ರತಿಪಾದಿಸಿದರು. ಒಮ್ಮೆ ನಾಡಿನಲ್ಲಿ ಸಿಕ್ಕುವ ಆಹಾರ ಅರಗಿಸಿಕೊಂಡು ಅದರ ರುಚಿ ಕಂಡುಕೊಳ್ಳುವ ಕಾಡಿನ ಜೀವಿಗಳು ಮರಳಿ ಅರಣ್ಯಕ್ಕೆ ತೆರಳಲು ಮುಂದಾಗಲಾರವು ಎಂದೂ ಅಭಿಪ್ರಾಯಪಟ್ಟರು.

ಸಕಲೇಶಪುರದ ಮಾಜಿ ಶಾಸಕ ಎಚ್.ಎಸ್. ವಿಶ್ವನಾಥ್ ಮಾತನಾಡಿ, ಭಾರತದಲ್ಲಿ ೨೨ ಸಾವಿರ ಆನೆಗಳ ಪೈಕಿ ಕರ್ನಾಟಕದಲ್ಲಿ ೭೦೦೦ ಆನೆಗಳು ಕಾಡಿನಲ್ಲಿವೆ. ಈ ಪೈಕಿ ೩೦೦ ಆನೆಗಳಷ್ಟೇ ನಾಡಿನಲ್ಲಿ ದಾಂಧಲೆ ನಡೆಸುತ್ತಿವೆ. ಕೊಡಗಿನಲ್ಲಿ ೧೫೦ ರಷ್ಟು ಆನೆಗಳು ಕಾಡಿನಿಂದ ನಾಡಿಗೆ ಬಂದಿವೆ. ಹೀಗಿರುವಾಗ ಇಷ್ಟು ಆನೆಗಳನ್ನು ಸ್ಥಳಾಂತರಿಸಿ ಪ್ರತ್ಯೇಕ ಸಾಕಾಣೆ ಕೇಂದ್ರ ತೆರೆಯುವತ್ತ ಸರ್ಕಾರ ಮುಂದಾಗಬೇಕು. ಶ್ರೀಲಂಕಾದ ಕೊಲಂಬೋ ವ್ಯಾಪ್ತಿಯಲ್ಲಿ ೨೦೦ ಕಾಡಾನೆಗಳಿಗಾಗಿ ಇಂಥ ಆನೆ ಸಾಕಾಣೆ ಕೇಂದ್ರ ತೆರೆಯಲಾಗಿದ್ದು ಈ ತಾಣವನ್ನು ಪ್ರವಾಸಿ ತಾಣವಾಗಿಸಿ ಪ್ರವೇಶ ಶುಲ್ಕದಿಂದ ಲಭಿಸುವ ವರಮಾನದಲ್ಲಿ ಕೇಂದ್ರ ನಿರ್ವಹಣೆಯಾಗುತ್ತಿದೆ. ಇದನ್ನೇ ಮಾದರಿಯಾಗಿರಿಸಿಕೊಂಡು ಕರ್ನಾಟಕದಲ್ಲಿಯೂ ನದಿ ತೀರದಲ್ಲಿನ ೪೦೦ ಎಕ್ರೆ ಗುರುತಿಸಿ ಕಾಡಾನೆ ಪುನರ್ವಸತಿ ಕೇಂದ್ರ ರೂಪಿಸಲೇಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ ಮನೆಗೆ ಚಿರತೆ ಬಂದರೆ ನಿದ್ದೆ ಬಿಟ್ಟು ಎದ್ದು ಕಾರ್ಯಾಚರಣೆ ಕೈಗೊಳ್ಳುವ ಸರ್ಕಾರ, ಮಲೆನಾಡಿನ ತೋಟಗಳು, ಮನೆಗಳಿಗೆ ಆನೆ, ಹುಲಿ, ಚಿರತೆ ಬಂದಾಗ ಅವುಗಳೊಂದಿಗೆ ಸಹಬಾಳ್ವೆ ನಡೆಸಿ ಎಂದು ಉಪದೇಶ ಮಾಡುತ್ತದೆ. ಇದೆಂಥ ನ್ಯಾಯ ಎಂದೂ ಪ್ರಶ್ನಿಸಿದ ವಿಶ್ವನಾಥ್, ನಗರ ಪ್ರದೇಶಗಳಲ್ಲಿ ಕುಳಿತು ವನ್ಯಜೀವಿ ಸಂಘರ್ಷ ತಡೆಗೆ ಸಲಹೆ ನೀಡುವ ತಜ್ಞರು ವನ್ಯಜೀವಿ ದಾಂಧಲೆಯಿರುವ ಗ್ರಾಮಗಳಿಗೆ ಬಂದು ವಾಸ್ತವಾಂಶ ಅರಿತು ಸರ್ಕಾರಕ್ಕೆ ಸಲಹೆ ನೀಡಬೇಕೆಂದೂ ಆಗ್ರಹಿಸಿದರು.

ಕೇರಳ ವನ್ಯಜೀವಿ ಕಾರ್ಯಪಡೆಯ ಮುಖ್ಯಸ್ಥ ಪೌಲ್ ಮ್ಯಾಥ್ಯು ಮಾತನಾಡಿ, ಮಲೆನಾಡು ಜಿಲ್ಲೆಗಳಲ್ಲಿ ಅರಣ್ಯ ಪ್ರಮಾಣವೇನೂ ಕ್ಷೀಣವಾಗಿಲ್ಲ. ಬದಲಿಗೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇರಳ ಸರ್ಕಾರ ಅನೇಕ ಜಿಲ್ಲೆಗಳಲ್ಲಿ ಗಜಮುಕ್ತಿ ಯೋಜನೆ ಯಶಸ್ವಿ ಮಾಡಿದ್ದು, ಇದೇ ಮಾದರಿಯನ್ನು ಕರ್ನಾಟಕದ ಮಲೆನಾಡು ಜಿಲ್ಲೆಗಳಿಗೂ ಅನುಷ್ಟಾನಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಭಾವದ ಬಗ್ಗೆ ಹೇಳಿದ ಪೌಲ್, ಮಂಗನಿಗೆ ಕಲ್ಲು ಹೊಡೆದರೂ ಅದು ಕಾನೂನಿನಡಿ ಮಂಗನ ಬೇಟೆಗೆ ಸಮಾನವಾಗಿದೆ. ಇಷ್ಟೊಂದು ಪ್ರಬಲ ಕಾನೂನು ಅರಣ್ಯ ಇಲಾಖೆಯ ನೆರವಿಗಿದೆ. ಹೀಗಾಗಿ ಪರಿಣಾಮಕಾರಿಯಾಗಿ ವನ್ಯಜೀವಿ ದಾಂಧಲೆ ತಡೆಗೆ ಕಷ್ಟಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

ಸ್ವಯಂಚಾಲಿತ ಎಚ್ಚರಿಕೆ ಗಂಟೆ, ಸೋಲಾರ್ ಬೇಲಿಯ ಸಮರ್ಥ ನಿರ್ವಹಣೆ, ರೈಲ್ವೇ ಕಂಬಿಗಳ ಅಳವಡಿಕೆ, ಪ್ರಬಲ ತಡೆಗೋಡೆ ಅಳವಡಿಕೆಯಂಥ ಯೋಜನೆ ಜಾರಿಯೊಂದಿಗೆ ಕಾಫಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆ ಸೇರಿದಂತೆ ವನ್ಯಜೀವಿಗಳ ದಾಂಧಲೆಗೆ ಕಡಿವಾಣ ಹಾಕಲು ಸಾಧ್ಯ ಎಂದೂ ಪೌಲ್ ಥಾಮಸ್ ಸಲಹೆ ನೀಡಿದರು. ತಮಿಳುನಾಡಿನಲ್ಲಿ ನವತಂತ್ರಜ್ಞಾನದ ಎಐ ಬಳಸಿ ವನ್ಯಜೀವಿ ದಾಂಧಲೆ ತಡೆಯ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇಂಥ ಕೇಂದ್ರಗಳ ಉಪಯುಕ್ತತೆ ಬಗ್ಗೆ ಸ್ಪಷ್ಟವಾಗಲಿದೆ ಎಂದೂ ಪೌಲ್ ಹೇಳಿದರು.

ಹುಲಿ, ಚಿರತೆ, ಆನೆಗಳು ಮಾತ್ರವಲ್ಲದೇ ಮಂಗ,ಕಾಡೆಮ್ಮೆ, ನವಿಲು, ಸೇರಿದಂತೆ ಸಣ್ಣ ಪುಟ್ಟ ವನ್ಯಜೀವಿಗಳು ಕೂಡ ಭವಿಷ್ಯದಲ್ಲಿ ಕೃಷಿಕರಿಗೆ ಸಮಸ್ಯೆಯಾಗಬಲ್ಲ ಸಾಧ್ಯತೆ ಇದೆ ಎಂದೂ ತಾಮಸ್ ಪೌಲ್ ಎಚ್ಚರಿಸಿದರು.

ಮಡಿಕೇರಿಯ ಕಾಫಿ ಬೆಳೆಗಾರ ಮೋಹನ್ ದಾಸ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಅರಣ್ಯಾಧಿಕಾರಿಗಳ ಶೀಘ್ರ ವರ್ಗಾವಣೆಯೂ ವನ್ಯಜೀವಿ ಸೇರಿದಂತೆ ಕೃಷಿಕರ ಹಲವಾರು ಸಮಸ್ಯೆ ಪರಿಹಾರಕ್ಕೆ ತೊಡಕಾಗಿದೆ. ಅಡಕೆ, ಬಾಳೆ, ತೆಂಗು,ಸೇರಿದAತೆ ಕೃಷಿಕರು ಮಿಶ್ರಬೆಳೆ ಬೆಳೆಯಬೇಕು ಎಂಬ ಸಲಹೆ ಸೂಕ್ತವಾದರೂ ಯಾವುದೇ ಫಸಲನ್ನೂ ವನ್ಯಜೀವಿಗಳು ಬಿಡದಿರುವಾಗ ಯಾವ ಬೆಳೆಯನ್ನು ಬೆಳೆಯಲು ಸಾಧ್ಯವಿದೆ ಎಂದು ನೋವು ತೋಡಿಕೊಂಡರು. ಕೃಷಿ ಫಸಲು ನಾಶಕ್ಕೆ ಸರ್ಕಾರಗಳು ನೀಡುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸಲೇಬೇಕು ಎಂದೂ ಮೋಹನ್ ದಾಸ್ ಒತ್ತಾಯಿಸಿದರು.

ವೇದಿಕೆಯಲ್ಲಿ ಸಕಲೇಶಪುಪದ ತೆಂಕಲಗೂಡು ಮಠಾಧೀಶ ಚನ್ನಸಿದ್ದೇಶ್ವರ ಶಿವಾಚಾರ್ಯ, ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಸೇರಿದಂತೆ ಗಣ್ಯರು ಹಾಜರಿದ್ದರು. ವಿಜಯ್ ಅಂಗಡಿ ನಿರೂಪಿಸಿದರು.