ಮಡಿಕೇರಿ, ಡಿ. ೨೩; ಮಡಿಕೇರಿ ನಗರ ಸಭೆಯ ಕೊನೆಯ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ಕು ಸಮಿತಿಗಳಿಗೆ ನಾಲ್ವರು ಬಿಜೆಪಿ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರ ಸಭಾ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಎಸ್.ಸಿ.ಸತೀಶ್ ಕುಮಾರ್, ತೆರಿಗೆ ನಿರ್ಧಾರ ಮತ್ತು ಹಣಕಾಸು ಸಮಿತಿಗೆ ಅರುಣ್ ಶೆಟ್ಟಿ, ಪಟ್ಟಣ ಯೋಜನೆ ಹಾಗೂ ನಗರ ಅಭಿವೃದ್ಧಿ ಸಮಿತಿಗೆ ಕೆ.ಎಂ.ಅಪ್ಪಣ್ಣ, ಹಾಗೂ ಲೆಕ್ಕ ಪತ್ರ ಸಮಿತಿಗೆ ಶಾರದಾ ನಾಗರಾಜ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಸ್ಥಾಯಿ ಸಮಿತಿಗೆ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಾಗಿ ಆಕಾಂಕ್ಷಿಗಳ ಮನವೊಲಿಸುವ ಪ್ರಯತ್ನ ನಡೆಸಲಾಯಿತು.
ಕೆಲವರು ಸಮ್ಮತಿಸಿದರಾದರೂ ಒಂದಿಬ್ಬರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಚೀಟಿ ಹಾಕುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ನಂತರದಲ್ಲಿ ನಗರಸಭಾ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ರಮೇಶ್, ಸದಸ್ಯರುಗಳು ಹಾಜರಿದ್ದರು.