ಮಡಿಕೇರಿ, ಡಿ. ೨೩: ವಿವಾದಿತ ಕೊಡಗು ಡಿ.ಸಿ.ಕಚೇರಿಯ ತಡೆಗೋಡೆ ವೀಕ್ಷಣೆಗೆ ಬಂದ ಲೋಕಾಯುಕ್ತ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳ ನಡೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿದೆ.

ಇಂದು ಬೆಳಿಗ್ಗೆ ಯಾರ ಕಣ್ಣಿಗೂ ಕಾಣಿಸದಂತೆ ತಡೆಗೋಡೆ ಬಳಿ ಬಂದು ಮೇಲಿಂದ ಒಮ್ಮೆ, ಕೆಳಗಿನಿಂದ ಒಮ್ಮೆ ತಡೆಗೋಡೆಯನ್ನು ಪ್ರವಾಸಿಗರ ರೀತಿ ವೀಕ್ಷಣೆ ಮಾಡಿ ನಂತರ ನಗರ ಹೊರವಲಯದ ಗೌಪ್ಯ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪತ್ರಕರ್ತರ ಕಣ್ಣಿಗೂ ಹಾಗೂ ಸಾರ್ವಜನಿಕರ ಕಣ್ಣಿಗೂ ಕಾಣಸಿಗದೆ ಮಾಯವಾದ ಬಗ್ಗೆ ವರದಿಯಾಗಿದೆ.

ಬರೋಬ್ಬರಿ ೭.೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಕಳಪೆ ಕಾಮಗಾರಿ ಪರಿಣಾಮ ಕುಸಿದು ಬೀಳುವ ಆತಂಕ ಎದುರಾಗಿತ್ತು. ಈ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರು. ಸರ್ಕಾರ ಕಳಪೆ ಕಾಮಗಾರಿ ಹಾಗೂ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿತ್ತು.

ತಡೆಗೋಡೆ ಸರಿಪಡಿಸದಿದ್ದರೆ ಜಿಲ್ಲಾಡಳಿತ ಭವನವೇ ಕುಸಿಯುವ ಭೀತಿ ಎದುರಾದ ಹಿನ್ನಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ವಿಧಾನ ಸಭೆಯ ಅರ್ಜಿ ಸಮಿತಿಯ ಮುಂದೆ ಈ ಪ್ರಕರಣವನ್ನು ತಂದರು. ನಂತರ ಅರ್ಜಿ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಬದಲಾಯಿಸಿ ಹೆಚ್ಚುವರಿ ೪-೫೦ ಕೋಟಿ ಹಣ ವಿನಿಯೋಗಿಸಿ ತಡೆಗೋಡೆ ಕಾಮಗಾರಿಯನ್ನು ನಡೆಸಲು ಸೂಚನೆ ನೀಡಿದ ಮೇರೆಗೆ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು.

ಅಕ್ರಮದ ಬಗ್ಗೆ ತನಿಖೆ ಮುಂದುವರಿಸಿರುವ ಲೋಕಾಯುಕ್ತ ಸಂಪೂರ್ಣ ಪರಿಶೀಲನೆ ನಡೆಸಲು ಕಾರ್ಯಕ್ರಮ ರೂಪಿಸಿತ್ತು. ಆದರೆ ಏಕಾಏಕಿ ಕಾರ್ಯಕ್ರಮ ಬದಲಿಸಿದ್ದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿವೆ. ಯಾವುದೇ ಪರಿಶೀಲನೆ ನಡೆಸದೆ ತೆರಳಿರುವುದು ಮತ್ತು ಗೌಪ್ಯ ಸ್ಥಾನಕ್ಕೆ ಹೋಗಿರುವುದು ಅನುಮಾನಕ್ಕೆ ಆಸ್ಪದ ಮಾಡಿದೆ. ಅಧಿಕಾರಿಗಳ ಭ್ರಷ್ಟಾಚಾರದಿಂದ ೪-೫೦ ಕೋಟಿಯಷ್ಟು ಸಾರ್ವಜನಿಕ ತೆರಿಗೆ ಹಣ ಪೋಲಾಗಿದ್ದು ಅದನ್ನು ವಸೂಲಿ ಮಾಡುವ ಕೆಲಸ ಆಗಬೇಕಿದೆ ಎಂದು ಹೇಳಿರುವ ದೂರುದಾರ ತೆನ್ನಿರ ಮೈನಾ ರವರು ಲೋಕಾಯುಕ್ತ ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ದೂರುದಾರರು ಮತ್ತು ಆರೋಪಿತ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಬೇಕು. ಈ ಬಾರಿ ಯಾವುದೇ ಸೂಚನೆ ನೀಡದಿರುವುದು ಅನುಮಾನ ಮೂಡಿಸಿದೆ. ಇದನ್ನು ಮಾನ್ಯ ಲೋಕಾಯುಕ್ತ ನ್ಯಾಯಮೂರ್ತಿಗಳ ಅವಗಾಹನೆಗೆ ತರಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.