ವೀರಾಜಪೇಟೆ, ಡಿ. ೨೩: ವೀರಾಜಪೇಟೆ ಪುರಸಭಾ ವ್ಯಾಪ್ತಿಯ ಗೌರಿ ಕೆರೆಗೆ ತೆರಳುವ ಮಾರ್ಗದಲ್ಲಿ ಶಾಸಕರ ಅನುದಾನ ರೂ. ೭ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಚರಂಡಿ ಹಾಗೂ ೮ ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟಿಸಿದರು. ಪುರಸಭಾ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಈ ಹಿಂದೆ ಗೌರಿ ಕೆರೆಯ ಈ ಭಾಗದ ರಸ್ತೆಗೆ ಅನುದಾನ ಒದಗಿಸಿದ್ದರು. ಇದೀಗ ಪೂರ್ಣಗೊಂಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಪುರಸಭೆ ಮಾಜಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ ಈ ರಸ್ತೆಯು ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಿಂದ ಸರಕಾರಿ ಆಸ್ಪತ್ರೆ ಹಾಗೂ ತಾಲೂಕು ಕಛೇರಿಗೆ ತೆರಳುವ ಉಪಯುಕ್ತ ರಸ್ತೆಯಾಗಿದ್ದು ಉತ್ತಮ ಗುಣಮಟ್ಟದ ರಸ್ತೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶೀಭಾ ಪ್ರಥ್ವಿನಾಥ್, ಪುರಸಭೆ ಮಾಜಿ ಸದಸ್ಯರುಗಳಾದ ಮಹಮ್ಮದ್ ರಾಫಿ, ಎಸ್ ಎಚ್. ಮತೀನ್, ಡಿ.ಪಿ.ರಾಜೇಶ್, ರಜನಿಕಾಂತ್, ಕೊಡವ ಸಮಾಜದ ಉಪಾಧ್ಯಕ್ಷ ಕಾಣತ್ತಂಡ ಜಗದೀಶ್ ಸೇರಿದಂತೆ ಪಕ್ಷದ ಹಿರಿಯ-ಕಿರಿಯ ಮುಖಂಡರು, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪುರಸಭೆ ಸಿಬ್ಬಂದಿಗಳು, ಸ್ಥಳೀಯರು ಇದ್ದರು.