ಕಣಿವೆ, ಡಿ. ೨೩ : ವಾಹನವೊಂದು ಡಿಕ್ಕಿ ಯಾಗಿ ರಸ್ತೆ ದಾಟುತ್ತಿದ್ದ ಕರುವೊಂದಕ್ಕೆ ಮಾರಣಾಂತಿಕವಾಗಿ ಗಾಯಗೊಂಡ ಪ್ರಸಂಗ ಮಂಗಳವಾರ ಕುಶಾಲನಗರದ ಬಿಎಂ ರಸ್ತೆಯಲ್ಲಿ ಸಂಭವಿಸಿದೆ.
ಗಾಯಗೊAಡ ಕರುವಿಗೆ ಚಿಕಿತ್ಸೆ ಕೊಡಲು ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದಾಗ ಎಲ್ಲೋ ದೂರದಲ್ಲಿ ಇದ್ದ ಅದರ ತಾಯಿ ಹಸು ಕೂಡ ಆಸ್ಪತ್ರೆ ಬಳಿ ಬಂದು ರೋಧಿಸಿದ ಪ್ರಸಂಗ ನೋಡುಗರ ಮನಮಿಡಿಯುವಂತಿತ್ತು. ರಾಷ್ಟ್ರೀಯ ಹೆದ್ದಾರಿ ಕುಶಾಲನಗರ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಅಮಾಯಕ ಗೋವುಗಳಿಗೆ ಅಪರಿಚಿತ ವಾಹನಗಳು ಡಿಕ್ಕಿ ಹೊಡೆದು ಗಾಯಗೊಳಿಸಿ ತೆರಳುತ್ತಿರುವ ಪ್ರಸಂಗಗಳು ನಿರಂತರವಾಗಿ ಘಟಿಸುತ್ತಲೇ ಇವೆ.
ಅದರಲ್ಲೂ ಮುಂಜಾನೆ ಹಾಗೂ ಮುಸ್ಸಂಜೆ ಸಮಯ ಇಂತಹ ಘಟನಾವಳಿಗಳು ಹೆಚ್ಚು ನಡೆಯುತ್ತಿವೆ. ವಿಶಾಲವಾದ ರಸ್ತೆಯಲ್ಲಿ ಅತಿ ವೇಗದ ಸಂಚಾರವೇ ಮುಗ್ಧ ಪ್ರಾಣಿಗಳ ಜೀವಕ್ಕೆ ಕಂಟಕವಾಗುತ್ತಿದೆ.
ಕುಶಾಲನಗರ ಪಟ್ಟಣದ ಕೆನರಾ ಬ್ಯಾಂಕ್ ಮುಂಬದಿಯಲ್ಲಿ ಸೋಮವಾರ ರಾತ್ರಿ ಅಪರಿಚಿತ ವಾಹನವೊಂದು ಕಪ್ಪು ಬಣ್ಣದ ಕರುವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರುವಿನ ಹಣೆ ಹಾಗೂ ತಲೆಯ ಭಾಗಕ್ಕೆ ತೀವ್ರ ತರಹದ ಗಾಯವಾಗಿ ರಕ್ತಸ್ರಾವವಾಗಿತ್ತು.
ಮೊದಲೇ ಕೊರೆವ ಚಳಿ, ಗಾಯಗೊಂಡು ರಕ್ತಸ್ರಾವಕ್ಕೀಡಾಗಿದ್ದ ಕರುವಿನ ಸ್ಥಿತಿಯನ್ನು ಕಂಡ ವ್ಯಕ್ತಿಯೊಬ್ಬರು ಮಾನವೀಯತೆ ತೋರಿ ವಾಟ್ಸಾö್ಯಪ್ ಗ್ರೂಪ್ ಒಂದರಲ್ಲಿ ಕರುವಿನ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಕುಶಾಲನಗರ ಪಟ್ಟಣದ ಉದ್ಯಮಿ ದಾವುದ್ ಎಂಬವರು ಕೂಡಲೇ ಸ್ಥಳಕ್ಕೆ ತೆರಳಿದರು. ಪುರಸಭೆಯ ಪೌರ ಕಾರ್ಮಿಕರ ಸಹಾಯ ಪಡೆದು ಪಶುಚಿಕಿತ್ಸಾಲಯಕ್ಕೆ ಸಾಗಿಸ ಲಾಯಿತು.
ನಂತರ ಪಶು ವೈದ್ಯಾಧಿಕಾರಿ ಡಾ.ಸಂಜೀವ್ ಕುಮಾರ್ ಸಿಂಧೆ ಅವರು ಗಾಯಗೊಂಡ ಕರುವನ್ನು ಚಿಕಿತ್ಸೆಗೆ ಒಳಪಡಿಸಿದರು. ಅದರ ಕಣ್ಣಿನ ಕೆಳ ಭಾಗದಲ್ಲಿ ಎರಡು ಇಂಚಿನಷ್ಟು ತೂತು ಬಿದ್ದಿದ್ದು ಅದಕ್ಕೆ ಹೊಲಿಗೆ ಹಾಕಲಾಗಿದೆ. ಹಾಗೆಯೇ ಕೊಂಬಿನ ಭಾಗದಲ್ಲೂ ಗಾಯವಾಗಿದ್ದು ಅದಕ್ಕೂ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಇದೇ ಸಂದರ್ಭ ಕೊಡಗು ಜಿಲ್ಲೆಯ ಪಶುಪಾಲನಾ ಇಲಾಖೆಯ (ಆಡಳಿತ) ಉಪನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಅವರೂ ಕೂಡ ಸ್ಥಳದಲ್ಲಿ ಇದ್ದರು. ಇದೀಗ ಈ ಕರು ಚೇತರಿಸಿಕೊಳ್ಳುತ್ತಿದ್ದು ಕರುವಿನ ವಾರಸುದಾರರಿಗೆ ಒಪ್ಪಿಸಲಾಗಿದೆ.
ಆಸ್ಪತ್ರೆ ಬಳಿಗೆ ಧಾವಿಸಿ ಬಂದ ಹಸು :
ತನ್ನ ಮಗಳು (ಕರು) ಗಾಯಗೊಂಡು ಚಿಕಿತ್ಸೆಗಾಗಿ ಕುಶಾಲನಗರದ ಪಶು ಚಿಕಿತ್ಸಾಲಯಕ್ಕೆ ಕರೆ ತಂದ ವಿಷಯ ಅಮ್ಮನಾದ ಹಸುವಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಹಗಲು ಬೇರೆ. ಹೆಚ್ಚು ಜನನಿಬಿಡ ಹಾಗೂ ವಾಹನಗಳ ಸಂದಣಿಯ ಹೆದ್ದಾರಿಯಲ್ಲೇ ಕಣ್ಣೀರಿಟ್ಟು ಘೀಳಿಡುತ್ತಾ ಆಸ್ಪತ್ರೆಯತ್ತ ಧಾವಿಸಿ ಬಂದ ತಾಯಿ ಹಸು ನಿತ್ರಾಣಗೊಂಡು ಮಲಗಿದ್ದ ಕರುವನ್ನು ಕಂಡು ಮಮ್ಮಲ ಮರುಗಿತು.
ಮಲಗಿದ್ದ ಕರುವಿನ ಮುಖದಲ್ಲಿ ಹರಿದಿದ್ದ ನೆತ್ತರು ಕಂಡು ಕಣ್ಣೀರಿಟ್ಟ ತಾಯಿ ಹಸು ತನ್ನ ನಾಲಿಗೆಯಲ್ಲಿ ಸಾವರಿಸಿ ಅದರ ನೋವು ನುಂಗುವ ಯತ್ನ ಮಾಡಿತು. ಅತ್ತಿಂದಿತ್ತ, ಇತ್ತಿಂದತ್ತ ಕರುವಿನ ಸುತ್ತಾ ಸುತ್ತುವರೆದು ತನ್ನ ಸಂಕಟ ಹಾಗೂ ನೋವನ್ನು ನೆರೆದಿದ್ದವರ ಬಳಿ ವ್ಯಕ್ತಪಡಿಸಿತು.
ಮೂಕ ಪ್ರಾಣಿಯ ರೋಧನೆ ಹಾಗೂ ಆಲಾಪನೆ ಕಂಡ ಸ್ಥಳದಲ್ಲಿದ್ದವರು ಅರೆ ಕ್ಷಣ ಬೇಸ್ತು ಬಿದ್ದರು. ಅಷ್ಟೇ ಅಲ್ಲ, ಕೆಲವರ ಕಣ್ಣಾಲಿಗಳು ತುಂಬಿ ಹೋದವು. ಸ್ವತಃ ಪಶು ವೈದ್ಯಾಧಿಕಾರಿ ಡಾ.ಸಂಜೀವ್ ಕುಮಾರ್ ಸಿಂಧೆ ಅವರು ಹೇಳಿದಂತೆ, ನಾನು ಗಾಯಗೊಂಡ ಬಹಳಷ್ಟು ಗೋವುಗಳಿಗೆ ಚಿಕಿತ್ಸೆ ಕೊಟ್ಟಿದ್ದೇನೆ.
ಈ ದಿನ ಕುಶಾಲನಗರದಲ್ಲಿ ನಡೆದ ಘಟನೆ ಮಾತ್ರ ನನ್ನ ಕಣ್ಣಲ್ಲೂ ನೀರು ತರಿಸಿತು. ಗಾಯಗೊಂಡ ಕರುವಿನ ಪರಿಸ್ಥಿತಿ ಮತ್ತು ಅದನ್ನು ಆಸ್ಪತ್ರೆಗೆ ಸಾಗಿಸಿದ ರೀತಿ ಈ (ಅಮ್ಮ) ಹಸುವಿಗೆ ತಿಳಿದದ್ದಾದರೂ ಹೇಗೆ ? ಅದಕ್ಕೆ ಯಾರಾದರೂ ಹೇಳಲು ಸಾಧ್ಯವೇ ? ನಮ್ಮ ಚಿಕಿತ್ಸಾಲಯದ ಬಳಿ ಬಂದು ಅದು ಘೀಳಿಟ್ಟು ನಿತ್ರಾಣವಾಗಿದ್ದ ಕರುವನ್ನು ಕಂಡು ಅದರ ನಾಲಿಗೆಯಿಂದ ಸಾವರಿಸಿ ಸಾಂತ್ವನ ಹೇಳಿದ ರೀತಿ ಇದೆಯಲ್ಲಾ ಅದು ಮಾತ್ರ ಅಚ್ಚರಿ ಎಂದರು ವೈದ್ಯರು.
ಈ ಸಂದರ್ಭ ಮಾತನಾಡಿದ ದಾವುದ್, ಗೋವುಗಳ ಪಾಲಕರು ದಯಮಾಡಿ ಹೆದ್ದಾರಿಗೆ ಹಸುಗಳನ್ನು ಬಿಡದಂತೆ ಕಟ್ಟಿದಲ್ಲೇ ಹುಲ್ಲು ನೀರು ಹಾಕಿ ಪೋಷಿಸಬೇಕು. ಕೆಲವರ ವಾಹನ ಚಾಲನೆಯಿಂದ ಇಂತಹ ಘಟನೆಗಳು ಜರುಗುತ್ತವೆ. ಆದ್ದರಿಂದ ನಮ್ಮ ಗೋವುಗಳ ಬಗ್ಗೆ ನಮಗೆ ಕಾಳಜಿ ಇರಬೇಕು ಎಂದರು.
ಕೆ.ಎಸ್.ಮೂರ್ತಿ