ಸೋಮವಾರಪೇಟೆ,ಡಿ.೨೩: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ, ಹಾಕಿ ಕೂರ್ಗ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್ ತಿಳಿಸಿದರು.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಫೆ. ೨೦ ರಿಂದ ೨೨ರ ವರೆಗೆ ಹಾಕಿ ಕೂರ್ಗ್ ನೋಂದಾಯಿತ ೮ ತಂಡಗಳ ನಡುವೆ ಪಂದ್ಯಾಟಗಳು ನಡೆಯಲಿವೆ. ವಿಜೇತ ತಂಡಕ್ಕೆ ಮೊದಲ ಬಹುಮಾನ ರೂ. ಒಂದು ಲಕ್ಷ ನಗದು, ದ್ವಿತೀಯ ರೂ. ಐವತ್ತು ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಕ್ಕೆ ದಿ. ಬಿ.ಈ. ರಂಗಸ್ವಾಮಿ ಕುರುಹಿನಶೆಟ್ಟಿ ಚೂರಿಗಿಡ್ನ ಅವರ ನೆನಪಿನಲ್ಲಿ, ಮಕ್ಕಳಾದ ಬಿ.ಆರ್. ವೇಣು, ಬಿ.ಆರ್. ವಿಜಯ್ ಹಾಗೂ ಬಿ.ಆರ್. ವಿನಯ್ ಅವರುಗಳು ಟ್ರೋಫಿ ಮತ್ತು ನಗದು ಬಹುಮಾನ ಪ್ರಾಯೋಜಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ತಂಡದಲ್ಲಿ ಐದು ಮಂದಿ ಅತಿಥಿ ಆಟಗಾರರಿಗೆ ಅವಕಾಶ ಇದ್ದು, ಇದರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಬಹುದು ಎಂದರು. ಫೆ. ೨೦ರಂದು ಬೆಳಿಗ್ಗೆ ೯-೩೦ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಈ ಸಂದರ್ಭ ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರರಾದ ಬಿ.ಪಿ. ಗೋವಿಂದ, ಅರ್ಜುನ್ ಹಾಲಪ್ಪ, ಎಸ್.ವಿ. ಸುನೀಲ್, ವಿಕ್ರಂಕಾAತ, ಭಾರತ ಹಾಕಿ ತಂಡದ ತರಬೇತುದಾರ ಜನಾರ್ಧನ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಡಾಲ್ಫೀನ್ಸ್ ಸ್ಫೋರ್ಟ್ಸ್ ಕ್ಲಬ್ ನಿಂದ ಎರಡು ಬಾರಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಕ್ಲಬ್ ನಿಂದ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಯುವ ಆಟಗಾರರಿಗೆ ತರಬೇತಿ ನೀಡಲಾಗುತ್ತಿದ್ದು, ಹಲವಷ್ಟು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ಕೆ.ಜೆ. ಗಿರೀಶ್, ಗೌರವ ಅಧ್ಯಕ್ಷ ಎಚ್.ಎನ್. ಅಶೋಕ್, ಸಹಕಾರ್ಯದರ್ಶಿ ಬಿ.ಆರ್. ಮಹೇಶ್, ಸಲಹೆಗಾರ ಕೆ.ಎಸ್. ಪ್ರಕಾಶ್ ಹಾಗೂ ನಿರ್ದೇಶಕ ಮಂಜುನಾಥ್ ಇದ್ದರು.