ಕುಶಾಲನಗರ, ಡಿ. ೨೩ : ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಅಪರಾಧ ಪತ್ತೆ ಕಾರ್ಯಗಳ ಉದ್ದೇಶ ಇಟ್ಟುಕೊಂಡು ಕುಶಾಲನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಗಳ ಅಧಿಕೃತ ಉದ್ಘಾಟನೆ ಮತ್ತು ಅವುಗಳನ್ನು ಕುಶಾಲನಗರ ಪುರಸಭೆ ಮತ್ತು ಪೊಲೀಸ್ ಇಲಾಖೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ತಾ. ೨೬ ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ತಿಳಿಸಿದ್ದಾರೆ.

ಅವರು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕುಶಾಲನಗರ ಮುಳ್ಳುಸೋಗೆಯಿಂದ ಹಾರಂಗಿ ಕಡೆಗೆ ತೆರಳುವ ರಸ್ತೆಯಲ್ಲಿ ನಿರಂತರ ತ್ಯಾಜ್ಯಗಳನ್ನು ಎಸೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಪರಿಸರ ಮಾಲಿನ್ಯಕ್ಕೆ ತುತ್ತಾಗಿತ್ತು. ಇದನ್ನು ಮನಗಂಡು ಜನರಿಗೆ ಅರಿವು ಮೂಡಿಸಲು ರಸ್ತೆ ಬದಿಗಳಲ್ಲಿ ಫಲಕಗಳನ್ನು ಅಳವಡಿಸಿದರೂ ಯಾವುದೇ ರೀತಿಯ ಸ್ಪಂದನ ಲಭಿಸಿಲ್ಲ.

ಈ ಕಾರಣದಿಂದ ದೇವಾಲಯ ಸಮಿತಿಯ ಮೂಲಕ ಹಾಗೂ ವೈಯಕ್ತಿಕವಾಗಿ ಹಣ ಕ್ರೋಢೀಕರಿಸಿ ಸುಮಾರು ೧೫ ಕ್ಕೂ ಅಧಿಕ ಸಿಸಿ ಕ್ಯಾಮರಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಿ ಕಸ ತ್ಯಾಜ್ಯ ಎಸೆಯುವ ಬಗ್ಗೆ ಪತ್ತೆ ಹಚ್ಚಿ ಪೊಲೀಸ್ ದೂರು ನೀಡುವ ಮೂಲಕ ಇದೀಗ ಈ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿದಿದೆ. ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕಾಫಿ ಮತ್ತು ಇತರ ಘಟಕದ ೨೫ಕ್ಕೂ ಅಧಿಕ ಉದ್ಯಮಿಗಳು ತಮ್ಮ ಕಾರ್ಯಕ್ಕೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು, ಕೂಡ್ಲೂರು ವ್ಯಾಪ್ತಿಯ ಹೆದ್ದಾರಿಯಲ್ಲಿ ಕೂಡ ಆಧುನಿಕ ತಂತ್ರಜ್ಞಾನದ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಕಾರ್ಯಕ್ಕೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಇದೀಗ ತಮ್ಮ ಉದ್ದೇಶ ಈಡೇರಿದೆ.

ಈ ಹಿನ್ನೆಲೆಯಲ್ಲಿ ತಾ. ೨೬ರಂದು ಸಂಜೆ ೪ ಗಂಟೆಗೆ ಕುಶಾಲನಗರ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕವಾಗಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಮಂತರ್ ಗೌಡ, ಕುಶಾಲನಗರ ಡಿವೈಎಸ್‌ಪಿ ಚಂದ್ರಶೇಖರ್, ವೃತ್ತನಿರೀಕ್ಷಕÀ ಬಿ.ಎಸ್. ದಿನೇಶ್ ಕುಮಾರ್, ಕುಶಾಲನಗರ ಪುರಸಭೆಯ ಮುಖ್ಯ ಅಧಿಕಾರಿ ಗಿರೀಶ್, ಉದ್ಯಮಿಗಳಾದ ಎನ್. ಸಾತಪ್ಪನ್, ಎನ್. ವಿಶ್ವನಾಥನ್ ಮತ್ತು ಈಶ್ವರನ್ ಜವಾಹರ್ ಅವರುಗಳು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಪೌರಕಾರ್ಮಿಕ ಸತೀಶ್ ಮತ್ತು ರಾಜೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ನಿರ್ದೇಶಕರಾದ ಎಂ.ಎನ್. ಮೊಣ್ಣಪ್ಪ, ಎಂ.ಸಿ. ಸತೀಶ್, ಎ. ಎನ್. ಸುಬ್ಬಯ್ಯ, ಹೆಚ್.ಆರ್. ಸುರೇಶ್ ಇದ್ದರು.