ಕೂಡಿಗೆ, ಡಿ. ೨೩: ಕೂಡಿಗೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಗಣಕಯಂತ್ರ ವಿಷಯದ ಪಠ್ಯಪುಸ್ತಕ ತಯಾರಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರವನ್ನು ಪ್ರಮುಖರಾದ ಡಾ.ರಾಜಾರಾಂ ಶರ್ಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ಎ. ಐ. ತಂತ್ರಜ್ಞಾನದ ಉಪಯೋಗಗಳ ಬಗ್ಗೆ, ಹಾಗೂ ನೂತನ ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶೈಕ್ಷಣಿಕ ಸಮಾಲೋಚಕ ಬೆಳ್ಳಶೆಟ್ಟಿ ಅವರು ಶಿಕ್ಷಣದಲ್ಲಿ ತಂತ್ರಜ್ಞಾನ, ಗಣಕ ಯಂತ್ರದ ಅವಶ್ಯಕತೆ ಎಷ್ಟಿದೆ ಎಂದು ತಿಳಿಸಿ, ಎಲ್ಲ ವಿಷಯಗಳಲ್ಲೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದರು. ವಿಜ್ಞಾನ ತಂತ್ರಜ್ಞಾನ ಇವೆರಡು ಜಂಟಿಯಾಗಿದ್ದರೆ ಕಠಿಣ ಕೆಲಸವನ್ನು ಸುಲಭವಾಗಿಸಬಹುದು, ಆಧುನಿಕ ಜಗತ್ತಿನಲ್ಲಿ ಮುಂದುವರೆದ ದೇಶಗಳ ಜೊತೆ ಪೈಪೋಟಿ ಮಾಡಬೇಕೆಂದಾದರೆ ನಾವು ಸಹ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆ ಹೆಚ್ಚಾಗಿ ಮಾಡಬೇಕು, ಹಾಗಾಗಿ ಶಿಕ್ಷಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆ ಬಹಳ ಮುಖ್ಯ ಎಂದು ತಿಳಿಸಿದರು. ಪ್ರಮುಖರಾದ ಪುಂಡಲೀಕ ಅನವಾಲ, ಐಸಿಟಿ ವಿಷಯದ ಮಹತ್ವದ ಬಗ್ಗೆ ಮಾತನಾಡಿದರು. ವಸತಿ ಶಾಲೆಗಳಲ್ಲಿ ಐಸಿಟಿ ವಿಷಯದ ಜೊತೆಗೆ ತಂತ್ರಜ್ಞಾನ ಸೇರಿಸಿ ಬೋಧಿಸಲಾಗುತ್ತಿದ್ದು, ಮಕ್ಕಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಎ ಐ ತಂತ್ರಜ್ಞಾನದ ಬಗ್ಗೆ ಇನ್ನು ಹೆಚ್ಚಿನ ಒತ್ತು ನೀಡಿ ಕಲಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲೆ ಕೆ. ಆರ್ . ಭಾರತಿ ಅವರು ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕ ಪರಿಷ್ಕರಣಾ ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳಿಂದ ೨೫ ಮಂದಿ ಕಂಪ್ಯೂಟರ್ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಧಿಕಾರಿಗಳು ಶಾಲೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.