ಪೊನ್ನಂಪೇಟೆ, ಡಿ. ೨೫: ಪದವಿಪೂರ್ವ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಾ. ೩೧ ರಂದು ನಿವೃತ್ತಿ ಹೊಂದಲಿರುವ ವೀರಾಜಪೇಟೆ ಸರ್ಕಾರಿ ಪಿ.ಯು. ಕಾಲೇಜು ಪ್ರಾಂಶುಪಾಲೆ ಎನ್.ಕೆ. ಜ್ಯೋತಿ, ಇತ್ತೀಚೆಗೆ ನಿವೃತ್ತಿ ಹೊಂದಿದ ಕುಶಾಲನಗರ ಕನ್ನಡ ಭಾರತಿ ಪಿ.ಯು. ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ಹಾಗೂ ನಿವೃತ್ತ ಪ್ರಾಂಶುಪಾಲ ಚನ್ನಕೇಶವ ಮೂರ್ತಿ, ಗೋಣಿಕೊಪ್ಪಲು ಕಾಪ್ಸ್ ಪ.ಪೂ. ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ಹಾಗೂ ಎನ್‌ಸಿಸಿ ಅಧಿಕಾರಿ ಬಿ.ಎಂ. ಗಣೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಇದೇ ಸಂದರ್ಭ ಗೋಣಿಕೊಪ್ಪಲು ಕಾವೇರಿ ಪಿ.ಯು. ಕಾಲೇಜು ವತಿಯಿಂದ ಕಾಲೇಜಿನ ಹಳೇ ವಿದ್ಯಾರ್ಥಿಯೂ ಆದ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಅವರನ್ನು ಸನ್ಮಾನಿಸಿ. ಗೌರವಿಸಲಾಯಿತು.

ಗೋಣಿಕೊಪ್ಪಲು ಕಾವೇರಿ ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್. ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಲಯನ್ಸ್ ಪಿ.ಯು ಕಾಲೇಜು ಪ್ರಾಂಶುಪಾಲೆ ಲತಾ, ಕಾಪ್ಸ್ ಪಿ.ಯು. ಕಾಲೇಜು ಪ್ರಾಂಶುಪಾಲ ರಾಮಚಂದ್ರನ್, ಶನಿವಾರಸಂತೆ ಸರ್ಕಾರಿ ಪಿ.ಯು. ಕಾಲೇಜು ಪ್ರಾಂಶುಪಾಲ ಅಶೋಕ್, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲೆಯ ವಿವಿಧ ಪಿ.ಯು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರು ಪಾಲ್ಗೊಂಡಿದ್ದರು.