ಮಡಿಕೇರಿ, ಡಿ. ೨೭: ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ವಾರ್ಷಿಕ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಪತ್ರಕರ್ತ ಮಡಿಕೇರಿಯ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ.
ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಉದ್ಯಮ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗಾಂಧಿಪ್ರಿಯ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಈ ವರ್ಷದ ಗಾಂಧಿಪ್ರಿಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ವಿದ್ಯುನ್ಮಾನ, ಬಾನುಲಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ ಅನಿಲ್ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಆರ್. ವಿಜಯಸಮರ್ಥ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ತಾ. ೨೮ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿತವಾಗಿದ್ದು, ವಿಶ್ರಾಂತ ನ್ಯಾಯಮೂರ್ತಿ ಪಾಲಾಕ್ಷಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.