ಚೆಪ್ಪುಡಿರ, ಪರದಂಡ, ಕುಪ್ಪಂಡ, ಕುಲ್ಲೇಟಿರ ಗೆಲುವು
ಮಡಿಕೇರಿ, ಡಿ. ೨೭: ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎರಡನೇ ದಿನದ ಪಂದ್ಯಾಟದಲ್ಲಿ ಚೆಪ್ಪುಡಿರ, ಪರದಂಡ, ಕುಪ್ಪಂಡ ಹಾಗೂ ಕುಲ್ಲೇಟಿರ ಗೆಲುವು ದಾಖಲಿಸಿದವು.
ಚೆಪ್ಪುಡಿರ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ ೯-೦ ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಚೆಪ್ಪುಡಿರ ಪ್ರಣವ್ ಹಾಗೂ ನರೇನ್ ತಲಾ ಎರಡು, ಸೋಮಣ್ಣ, ಚೇತನ್, ಅಯ್ಯಪ್ಪ, ನಾಚಪ್ಪ, ದಿವನ್ ತಲಾ ಒಂದು ಗೋಲು ಬಾರಿಸಿದರು.
ಕೋಣೇರಿರ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ಪರದಂಡ ತಂಡ ೬-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪರದಂಡ ಚೆಶ್ವಿನ್ ಹಾಗೂ ರಂಜನ್ ಅಯ್ಯಪ್ಪ ತಲಾ ಎರಡು, ಪ್ರಧಾನ್, ಧೀರಜ್ ಮುತ್ತಣ್ಣ ತಲಾ ಒಂದು ಗೋಲು ದಾಖಲಿಸಿದರು.
ಕೂತಂಡ ಮತ್ತು ಕುಪ್ಪಂಡ ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡ ೩-೨ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ ಪರ ಚಂಗಪ್ಪ, ಶ್ಯಾನ್ ಹಾಗೂ ಜಗತ್ ತಲಾ ಒಂದು ಗೋಲು ಬಾರಿಸಿದರು. ಕೂತಂಡ ಪರ ಬೋಪಣ್ಣ ಕೆ.ಸಿ. ಎರಡು ಗೋಲು ದಾಖಲಿಸಿದರು.
ಕುಲ್ಲೇಟಿರ ಮತ್ತು ಮಾಚಮಾಡ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡ ೫-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಲ್ಲೇಟಿರ ಮಂದಪ್ಪ ತಲಾ ಎರಡು, ಚಿಟ್ಟಿಯಪ್ಪ, ಮುತ್ತಣ್ಣ ಹಾಗೂ ತಿಮ್ಮಯ್ಯ ತಲಾ ಒಂದು ಗೋಲು ಬಾರಿಸಿದರು.