ಸುಳ್ಯ, ಡಿ. ೨೭ : ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರು ಜನಮಾನಸದಲ್ಲಿ ಸದಾ ಅಜರಾಮರಾಗಿರುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ವತಿಯಿಂದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ಕುರುಂಜಿ ವೆಂಕಟ್ರಮಣ ಗೌಡರ ೯೭ನೇ ಜನ್ಮ ದಿನಾಚರಣೆಯ ಅಂಗವಾಗಿ ನೆಹರೂ ಸ್ಮಾರಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸ್ಥಾಪಕರ ದಿನಾಚರಣೆ ಹಾಗೂ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಸುವರ್ಣ ಸಂಭ್ರಮ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಸಮಾಜ ಕಟ್ಟಿದ ಡಾ.ಕೆವಿಜಿ ಅವರ ಬದುಕು ಸರ್ವರಿಗೂ ಆದರ್ಶ, ಹಳ್ಳಿಯ ವಿದ್ಯಾರ್ಥಿಗಳಿಗೆ ಜ್ಞಾನ, ವಿಜ್ಞಾನದ ಅರಿವು ನೀಡಿ ಹಲವಾರು ಸಾಧಕರನ್ನು ಸೃಷ್ಟಿಸಿ ಸಮಾಜಕ್ಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸುವರ್ಣ ಸಂಭ್ರಮ ಮಾಹಿತಿ ಕೈಪಿಡಿ ಬಿಡುಗಡೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಡಾ.ಕೆವಿಜಿಯವರು ಸುಳ್ಯದಲ್ಲಿ ಶೈಕ್ಷಣಿಕ ಅದ್ಭುತವನ್ನೇ ಸೃಷ್ಟಿಸಿದ್ದಾರೆ ಎಂದು ಬಣ್ಣಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಸುಳ್ಯವನ್ನು ಗುರುತಿಸುವಂತೆ ಮಾಡಿದ ಕೆವಿಜಿಯವರು ಹಾಕಿಕೊಟ್ಟ ಹಾದಿಯಲ್ಲಿ, ಅವರ ಆದರ್ಶವನ್ನು ಪಾಲಿಸಿ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಎಒಎಲ್‌ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ.ಐಶ್ವರ್ಯ ಕೆ.ಸಿ., ಹೇಮನಾಥ್ ಕೆ.ವಿ., ಕೋಶಾಧಿಕಾರಿ ಡಾ.ಗೌತಮ್ ಗೌಡ ಎ.ಜಿ., ನಿರ್ದೇಶಕರಾದ ಜಗದೀಶ್ ಎ.ಹೆಚ್, ಮೀನಾಕ್ಷಿ ಕೆ.ಎಚ್., ಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಲೀಲಾಧರ ಡಿ.ವಿ., ಎನ್‌ಎಂಸಿ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎA., ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ¥Ãರಾಲು ಉಪಸ್ಥಿತರಿದ್ದರು. ಕೆವಿಜಿ ಶಿಕ್ಷಣ ಸಂಸ್ಥೆಗಳಲ್ಲಿ ೨೫ ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.