ಮಡಿಕೇರಿ, ಡಿ. ೨೫: ಚೇನಂಡ ಕುಟುಂಬದ ವತಿಯಿಂದ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಪ್ರಯುಕ್ತ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಈ ಬಾರಿ ಬಾಲಕ-ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ಮುಕ್ತ ಹಾಕಿ ಪಂದ್ಯಾವಳಿಯನ್ನು ಜ.೧ ರಿಂದ ೪ ವರೆಗೆ ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಮಧು ಮಾದಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳನ್ನು ಗುರುತಿಸುವ ಸಲುವಾಗಿ ಇದೇ ಪ್ರಪ್ರಥಮ ಬಾರಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ೪ರಿಂದ ೭ನೇ ತರಗತಿವರೆಗೆ, ೮ರಿಂದ ೧೦ನೇ ತರಗತಿಯವರಗಿನ ಶಾಲಾ ವಿದ್ಯಾರ್ಥಿಗಳ ತಂಡ ಭಾಗವಹಿಸಲು ಅವಕಾಶವಿದೆ. ಈಗಾಗಲೇ ೧೬ ತಂಡಗಳು ನೋಂದಣಿ ಮಾಡಿ ಕೊಂಡಿದ್ದು, ತಾ.೨೮ ಕೊನೆ ದಿನವಾಗಿದೆ. ವಿಜೇತರಿಗೆ ಬಹುಮಾನ ಮತ್ತು ಹಾಕಿ ಕೂರ್ಗ್ ವತಿಯಿಂದ ಪ್ರಶಸ್ತಿ ಪತ್ರ ನೀಡಲಾಗುತ್ತದೆ ತಿಳಿಸಿದರು. ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಕಿಪಟುಗಳಿಗೆ ಹಾಕಿ ಉತ್ಸವ ಸಂದರ್ಭ ಒಂದು ತಿಂಗಳು ನುರಿತ ಆಟಗಾರರಿಂದ ತರಬೇತಿ ನೀಡಲಾಗು ತ್ತದೆ. ನಂತರ ೧೨ ಆಟಗಾರರನ್ನು ಮಾಜಿ ಒಲಂಪಿಯನ್ಗಳು ಆಯ್ಕೆ ಮಾಡಿ ಬಾಲಕ ಬಾಲಕಿಯರ ಕ್ರೀಡಾ ವಸತಿ ನಿಲಯದಲ್ಲಿ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ, ಆಯ್ಕೆಯಾದ ಆಟಗಾರರರಿಗೆ ಹಾಕಿ ಕಿಟ್ನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ೮೭೬೨೩೪೯೯೫೧, ೯೪೮೧೧೧೪೦೯೫ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ವಕ್ತಾರ ಸುರೇಶ್ ನಾಣಯ್ಯ, ಸಮಿತಿ ಸದಸ್ಯರಾದ ನಂದ ಜಗದೀಶ್, ಸಂಪತ್ ಉಪಸ್ಥಿತರಿದ್ದರು