ಪೆರಾಜೆ, ಡಿ. ೨೫ : ಪೆರಾಜೆ ಅರೆಭಾಷೆಯ ತವರೂರಾಗಿದ್ದು, ಅರೆಭಾಷೆ ಇಲ್ಲಿ ಸಮೃದ್ಧವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ನುಡಿದರು.
ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅರೆಭಾಷೆ ಕೂಡ್ಕಟ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪೆರಾಜೆ, ಪೆರಾಜೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ ಮತ್ತೆ ಗ್ರಾಮ ಗೌಡ ಸಮಿತಿ ಪೆರಾಜೆ ಇವುಗಳ ಸಹಯೋಗದಲ್ಲಿ ಪೆರಾಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ದೀಪ ಬೆಳಗಿ ಉದ್ಘಾಟನೆ ಮಾಡಿ ಮಾತನಾಡಿ ಭಾಷೆ ಅವನತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರದ್ದಾಗಿದೆ ಎಂದರು.
ಆ ದಿಸೆಯಲ್ಲಿ ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ ಎಂದು ನುಡಿದರು. ಪೆರಾಜೆ ಗ್ರಾಮದಿಂದ ಹಲವರು ಅರೆಭಾಷೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರೆಭಾಷೆಯ ಕವಿ ಭವಾನಿಶಂಕರ ಹೊದ್ದೆಟ್ಟಿ ಅವರು ಮಾತನಾಡಿ ಅರೆಭಾಷೆ ಸಾಹಿತ್ಯ ನಡೆದು ಬಂದ ದಾರಿ ವಿವರಿಸಿದರು. ಅರೆಭಾಷೆಯಲ್ಲಿ ಬರೆಯುವ ಅಭ್ಯಾಸವನ್ನೂ ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರ ಮೇಲಿದೆ ಎಂದು ನುಡಿದರು.
ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಪೆರಾಜೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭವಾನಿ ಕೊಳಂಗಾಯ, ಪೆರಾಜೆ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಕೆ.ಕೆ. ಪದ್ಮಯ್ಯ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯÀ ಮನು ಪೆರುಮುಂಡ ಇದ್ದರು. ಅರೆಭಾಷೆ ಕೂಡ್ಕಟ್ಟ್ - ೨೦೨೫ ಕಾರ್ಯಕ್ರಮದ ಪ್ರಯುಕ್ತ ನಡೆದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಲೋಕೇಶ್ ಕುಂಚಡ್ಕ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಇವರು ‘ಅರೆಭಾಷೆ ಇಂದು ಮತ್ತು ನಾಳೆ’ ಎಂಬ ವಿಷಯದ ಬಗ್ಗೆ ಹಾಗೂ ಸಂಜೀವ ಕುದ್ಪಾಜೆ ಇವರು ‘ಅರೆಭಾಷೆಯಲ್ಲಿ ಬದಲಾದ ಮದುವೆ ಕ್ರಮಗ’ ವಿಷಯಗಳ ಕುರಿತು ಮಾತನಾಡಿದರು. ನಂತರದಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. ಸೋಬಾನೆ, ಜೋಗುಳ ಪದ, ಅಜ್ಜಿಕತೆ, ಅರೆಭಾಷೆ ಕವನ ರಚನೆ ಕುರಿತ ಸ್ಫರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ ಶ್ರೀಶಾಸ್ತಾವು ದೇವಸ್ಥಾನ ಪೆರಾಜೆಯ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಸಂಪಾಜೆ ಹೋಬಳಿಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಚಿದಾನಂದ ಪೀಚೆಮನೆ, ಅಕಾಡೆಮಿ ಮಾಜಿ ಸದಸ್ಯೆ ಸಂಗೀತಾ ರವಿರಾಜ್, ಪೆರಾಜೆಯ ಚಿಗುರು ಯುವಕ ಮಂಡಲದ ಅಧ್ಯಕ್ಷÀ ರಮೇಶ್ ಮಜಿಕೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಸಂಚಾಲಕ ಗೋಪಾಲ ಪೆರಾಜೆ ಇವರು ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ನಿರೂಪಿಸಿದರು. ಡಾ. ಜ್ಞಾನೇಶ್ ಎನ್.ಎ. ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಶಿಲಾ ಚಿದಾನಂದ ನಿಡ್ಯಮಲೆ ಧನ್ಯವಾದ ಸಮರ್ಪಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯೆ ಕನಕಾಂಬಿಕ ಸಮಾರೋಪ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದರು. ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.