ಮಡಿಕೇರಿ, ಡಿ. ೨೭ : ಹೊಸ ವರ್ಷಾಚರಣೆ ಸಂದರ್ಭ ಜಿಲ್ಲೆಯ ಎಲ್ಲ ಹೋಂಸ್ಟೇ, ರೆಸಾರ್ಟ್, ಹೊಟೇಲ್, ಲಾಡ್ಜ್ಗಳಲ್ಲಿ ತಂಗುವ ಪ್ರವಾಸಿಗರು ಯಾವುದೇ ಮಾದಕವಸ್ತುಗಳ ಹಾಗೂ ಮದ್ಯಪಾನಕ್ಕೆ ಅವಕಾಶ ನೀಡದಂತೆ ಮಾಲೀಕರು ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ನಿತಿನ್ ಚಕ್ಕಿ ಆದೇಶ ಹೊರಡಿಸಿದ್ದಾರೆ.

೨೦೨೬ರ ಹೊಸ ವರ್ಷಾಚರಣೆ ಸಂದರ್ಭ ಪಾಲಿಸಬೇಕಾದ ನಿಯಮಗಳ ಕುರಿತಾಗಿ ಆದೇಶ ಹೊರಡಿಸಿರುವ ಅವರು ಯಾವುದೇ ಅಹಿತಕರ ಘಟನೆ ಅಥವಾ ತಪ್ಪುಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಸರಕಾರದ ಗಮನಕ್ಕೆ ತರತಕ್ಕದ್ದು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾದಕವಸ್ತುಗಳು ಹಾಗೂ ಮದ್ಯಪಾನ ಇತ್ಯಾದಿಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದ ಆಚರಣೆಗೆ ಜಿಲ್ಲೆಗೆ ವಿವಿಧ ಕಡೆಗಳಿಂದ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು, ಸಾರ್ವಜನಿಕರು ಆಗಮಿಸಲಿದ್ದು, ಪ್ರವಾಸಿಗರು ತಂಗುವ ಹೋಂ-ಸ್ಟೇ, ರೆಸಾರ್ಟ್, ಹೊಟೇಲ್-ಲಾಡ್ಜ್ಗಳಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.

ಅತಿಥಿಗಳು ಬಂದಾಗ ರಿಜಿಸ್ಟರ್ ಪುಸ್ತಕದಲ್ಲ್ಲಿ ಆಗಮಿಸಿರುವ ಎಲ್ಲಾ ಪ್ರವಾಸಿಗರ ಹೆಸರು, ಆಧಾರ್ ಕಾರ್ಡ್, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಪಡೆಯುವುದು ಹಾಗೂ ವಿದೇಶಿಯರು ಬಂದಾಗ ಅವರ ವೀಸಾ, ಪಾಸ್‌ಪೋರ್ಟ್, ವಿಮಾನ ಟಿಕೆಟ್ ಪರಿಶೀಲಿಸಿ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಮಾರ್ಗ ನಕ್ಷೆಯನ್ನು ತಿಳಿಸುವುದು.

ಪ್ರವಾಸಿ ತಾಣಗಳು ತೆರೆಯುವ ಹಾಗೂ ಮುಚ್ಚುವ ವೇಳೆಯನ್ನು ಪ್ರವಾಸಿಗರಿಗೆ ತಿಳಿಸುವುದು. ಕಡ್ಡಾಯವಾಗಿ ಮಾಲೀಕರು ಕಟ್ಟಡದಲ್ಲಿ ವಾಸವಿರತಕ್ಕದ್ದು ಹಾಗೂ ಪ್ರವಾಸಿಗರ ಜೊತೆ ಅವರ ಪ್ರವಾಸ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಹಾಗೂ ಸ್ಥಳೀಯ ಪದ್ಧತಿಗಳು ಮತ್ತು ಕಾನೂನುಗಳ ಬಗ್ಗೆ ತಿಳಿಸುವುದು.ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸುವುದು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಬೆಂಕಿ ನಂದಕವನ್ನು ಕಡ್ಡಾಯವಾಗಿ ಅಳವಡಿಸುವುದು. ಸಿಸಿಟಿವಿ ಅಳವಡಿಸುವುದು, ಸಿ.ಸಿ ಟಿವಿಯ ೪೫ ದಿನಗಳ ಫೂಟೇಜ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿ ಟಿವಿಯನ್ನು ಸರಿಯಾಗಿ ನಿರ್ವಹಿಸುವುದು. ಹಾಗೂ ‘ನೀವು ಸಿಸಿಟಿವಿ ಕಣ್ಗಾವಲಿನಲ್ಲಿರುತ್ತೀರಿ’ ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಸುವುದು.

ಕಡ್ಡಾಯವಾಗಿ ಒಣತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ಸಂಗ್ರಹಣೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ೨ ಲೀಟರ್‌ಗಳಿಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿದ್ದು, ಅದರಂತೆ ಸೂಕ್ತ ಕ್ರಮ ವಹಿಸುವುದು.

ಯಾವುದೇ ಪ್ರವಾಸಿಗರು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಬಾರದು. ತುರ್ತು ಸಮಯದಲ್ಲಿ ೨೪x೭ ಕಾರ್ಯನಿರ್ವಹಿಸುವ ದೂರವಾಣಿ ಸಂಖ್ಯೆ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ ೦೮೨೭೨-೨೨೧೦೭೭, ೦೮೨೭೨-೨೨೧೦೯೯, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ೯೪೮೦೮೦೪೯೦೦, ೦೮೨೭೨-೨೨೮೩೩೦ ನ್ನು ಸಂಪರ್ಕಿಸಬಹುದು ಎಂದು ನಿತಿನ್ ಚಕ್ಕಿ ಆದೇಶದಲ್ಲಿ ತಿಳಿಸಿದ್ದಾರೆ.