ವೀರಾಜಪೇಟೆ, ಡಿ. ೨೮: ವೀರಾಜಪೇಟೆ ಪುರಸಭೆಯ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಶಾಸಕರು ಹಾಗೂ ಮುಖ್ಯಮಂತಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಮೇಚಿರ ಡಾ. ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಎಲ್ಲರಿಗೂ ಪಕ್ಷದ ಶಲ್ಯ ಹೊದಿಸಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡ ಶಾಸಕರು, ಸಮಾಜದ ಪರ ಚಿಂತನೆ ಬೆಳೆಸಿಕೊಂಡು ನಾಡಿನ ಏಳಿಗೆಗೆ ಶ್ರಮಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಎಲ್ಲರನ್ನೂ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಶಾಸಕರು, ಒಳ್ಳೆಯ ಆಡಳಿತ ಹಾಗೂ ಜನಪರ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದು ಹೇಳಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯೆ, ಶಾಸಕಿ ವೀಣಾ ಅಚ್ಚಯ್ಯ, ಪಕ್ಷದ ಮುಖಂಡರು ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಡಾ. ಸುಭಾಷ್ ನಾಣಯ್ಯ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಪೆಮ್ಮಂಡ ಪೊನ್ನಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಡಿಸಿಸಿ ಸದಸ್ಯ ಅಬ್ದುಲ್ ರೆಹಮಾನ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಕೊಡವ ತಕ್ಕ್ ಜನಾಂಗ ಕಾರಡ ಒಕ್ಕೂಟದ ಅಧ್ಯಕ್ಷ ಸರ ಚಂಗಪ್ಪ, ಪಿ.ಜಿ. ಅಯ್ಯಪ ಸೇರಿದಂತೆ ಹಲವರು ಹಾಜರಿದ್ದರು.