ಪೊನ್ನಂಪೇಟೆ, ಡಿ. ೨೮: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್ ಹೇಳಿದರು.

ಪೊನ್ನಂಪೇಟೆಯ ಸಾಯಿ ಶಂಕರ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಜ್ಯೋತಿ ಪ್ರದಾನ್ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯ ಆಲೋಚನೆಯನ್ನೆ ಮಾಡಬೇಕು, ನಮ್ಮಲ್ಲಿ ಅಸೂಯೆಯ ಛಾಯೆ ಯಾವತ್ತೂ ಬರಬಾರದು ಮತ್ತು ಕಷ್ಟದಲ್ಲಿರುವವರಿಗೆ, ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ಸಹಾಯ ಹಸ್ತವನ್ನು ನೀಡುವಂತಹ ಗುಣಗಳನ್ನು ಮೈಗೂಡಿಸಿಕೊಂಡರೆ ನಾವು ಉತ್ತಮ ಸಮಾಜ ಹಾಗೂ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.

ಮತ್ತೋರ್ವ ಅತಿಥಿ, ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯ ಮಾದರಿಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಕೊನೆಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಗಣ್ಯರು ಜ್ಯೋತಿ ಪ್ರಧಾನ ಮಾಡಿ, ನೆನಪಿನ ಕಾಣಿಕೆ ನೀಡಿ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.

ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳಿಂದ ಮೂಡಿಬಂದ ಕೊಡವ ಸಾಂಸ್ಕೃತಿಕ ನೃತ್ಯ ಉಮ್ಮತ್ತಾಟ್, ಕರ್ನಾಟಕದ ವಿವಿಧ ಜನಪದ ನೃತ್ಯ ಸೇರಿದಂತೆ ದೇಶದ ೧೩ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನ, ಬಿ. ಇಡಿ ವಿದ್ಯಾರ್ಥಿಗಳಿಂದ ಶಿವತಾಂಡವ ನೃತ್ಯ ಗಮನ ಸೆಳೆಯಿತು.

ಸಾಯಿ ಶಂಕರ ವಿದ್ಯಾಸಂಸ್ಥೆಯ ಹಿರಿಯ ಪೋಷಕರಾದ ಅರಮಣಮಾಡ ಸತೀಶ್, ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರ ಪತ್ನಿ ಡಾ. ದೀಪ್ತಿ, ಮುಖ್ಯ ಶಿಕ್ಷಕರಾದ ನಿವ್ಯ ಎಂ.ಜಿ., ರೀನಾ ಕೆ.ಎಸ್., ಆಡಳಿತಾಧಿಕಾರಿ ರಮ್ಯಾ ಎಂ.ಡಿ., ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿ ಚಂದ್ರಿಕಾ ಸ್ವಾಗತಿಸಿ, ಬಿ.ಇಡಿ ಪ್ರಾಂಶುಪಾಲ ನಾರಾಯಣ್ ವಂದಿಸಿದರು. ಶಿಕ್ಷಕರಾದ ಭವಾನಿ, ಸಂತೋಷ್, ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.