ಮುಳ್ಳೂರು, ಡಿ. ೨೮: ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯನ್ನು ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಟ್ರಸ್ಟ್ ಕೊಡಗು ಮತ್ತು ಹಂಡ್ಲಿ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಯಿತು.
ಹಂಡ್ಲಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸೃಷ್ಟಿ ಮತ್ತು ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮೊದಲಿಗೆ ನಾವು ಪ್ರತಿಷ್ಠಾನ ಟ್ರಸ್ಟ್ನ ನಿರ್ದೇಶಕಿ ಸುಮನ ಮ್ಯಾಥ್ಯು ಮಕ್ಕಳ ಹಕ್ಕುಗಳು, ರಕ್ಷಣೆಗೆ, ಸರಕಾರ, ಸಂಬAಧ ಇಲಾಖೆಗಳು, ಅಧಿಕಾರಿಗಳು ಸ್ಪಂದಿಸುವ ಜವಾಬ್ದಾರಿ, ಮಕ್ಕಳ ಆರೋಗ್ಯ, ಮಕ್ಕಳ ಸುರಕ್ಷತೆ, ಮಕ್ಕಳ ರಕ್ಷಣೆಗೆ ಇರುವ ಕಾನೂನು ಕಾಯಿದೆಗಳು, ಮಕ್ಕಳ ಗ್ರಾಮಸಭೆಯನ್ನು ನಡೆಸುವ ಉದ್ದೇಶ ಇವುಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಂಡ್ಲಿ ಸರಕಾರಿ ಪ್ರೌಢಶಾಲೆಗೆ ಒಂದೇ ಶೌಚಾಲಯ ಇದೆ. ಮತ್ತೊಂದು ಶೌಚಾಲಯ ನಿರ್ಮಿಸಿಕೊಡುವಂತೆ, ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಶಾಲೆಗೆ ಸೇರಿದ ಜಾಗದಲ್ಲಿ ರಾತ್ರಿ ವೇಳೆ ಮದ್ಯಪಾನದ ಬಾಟಲ್, ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿನಿ ಇಂಪನ ಸಮಸ್ಯೆ ಹೇಳಿಕೊಂಡರು.
ಹಂಡ್ಲಿ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಸುಣ್ಣಬಣ್ಣ ಬಳಿಯುವಂತೆ ಹಿಂದಿನ ಮಕ್ಕಳ ಗ್ರಾಮಸಭೆಯಲ್ಲಿ ನಾವು ಪ್ರಸ್ತಾಪಿಸಿದ್ದೆವು. ಇನ್ನು ಸಹ ಆಗಿಲ್ಲ ಎಂದು ವಿದ್ಯಾರ್ಥಿ ಲವ ಗಮನ ಸೆಳೆದನು. ಮೂದರಲ್ಲಿ ಪ್ರಾಥಮಿಕ ಶಾಲೆಗೆ ನೀರಿನ ಸಮಸ್ಯೆಯಾಗುತ್ತಿದ್ದು ಶಾಲೆಗಾಗಿ ಮತ್ತೊಂದು ಕೊಳವೆ ಬಾವಿ ನಿರ್ಮಿಸಿಕೊಡುವಂತೆ, ಗ್ರಾಮದ ರಸ್ತೆ ಬದಿಯಲ್ಲಿ ಕಾಡು ಆವರಿಸಿಕೊಂಡಿದ್ದು ತೆರವುಗೊಳಿಸುವಂತೆ ಇನ್ನು ಮುಂತಾದ ಸಮಸ್ಯೆಗಳ ಬಗ್ಗೆ ಮಕ್ಕಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಸೃಷ್ಟಿ ಮಾತನಾಡಿ, ಮಕ್ಕಳ ಹಕ್ಕು ಪ್ರತಿಪಾದಿಸುವುದು ಮಕ್ಕಳ ಹಕ್ಕಾಗಿರುವುದರಿಂದ ನಮ್ಮ ಸಮಸ್ಯೆಯನ್ನು ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ಯಾವುದೇ ಹಿಂಜರಿಕೆ, ಅಳುಕಿಲ್ಲದೆ ಕೇಳಬೇಕು. ಹೀಗಾದರೆ ಮಾತ್ರ ಮಕ್ಕಳ ಸಮಸ್ಯೆ ಸರಕಾರ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತದೆ ಎಂದ ಅವರು, ಹಿಂದಿನ ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ರಾಜ್ಯದ ಗಮನ ಸೆಳೆದು ನಾವು ಪ್ರತಿಷ್ಠಾಪನಾ ಸಂಸ್ಥೆಯ ಮೂಲಕವಾಗಿ ಬೆಂಗಳೂರು ವಿಕಾಸನ ಸೌಧದಲ್ಲಿ ಮಕ್ಕಳ ಪ್ರಶ್ನಾವಳಿಯಲ್ಲಿ ಜಿಲ್ಲೆಯಿಂದ ಭಾಗವಹಿಸಿ ಅಲ್ಲಿನ ಅನುಭವಗಳನ್ನು ಮಕ್ಕಳ ಗ್ರಾಮಸಭೆಯಲ್ಲಿ ಹಂಚಿಕೊAಡರು.
ಸಭೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಾವಿತ್ರಮ್ಮ, ಪೋಕ್ಸೊ ಕಾಯಿಗೆ ಬಗ್ಗೆ ಪೊಲೀಸ್ ಸಿಬ್ಬಂದಿ ಸಹನ ಮಾಹಿತಿ ನೀಡಿದರು. ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಕಿರಂಗದೂರು, ಗ್ರಾ.ಪಂ. ಸದಸ್ಯರಾದ ವೀರೇಂದ್ರಕುಮಾರ್, ಚೈತ್ರ, ಪಿಡಿಓ ಅಂಜನದೇವಿ, ನಾವು ಪ್ರತಿಷ್ಠಾಪನಾ ಸಂಸ್ಥೆ ಸಂಸ್ಥಾಪಕ ಗೌತಮ್ ಕಿರಂಗದೂರು, ಸದಸ್ಯರಾದ ಸುಭಾಸ್, ವನಿತ ಮುಂತಾದವರಿದ್ದರು.