ಸೋಮವಾರಪೇಟೆ, ಡಿ. ೨೯: ಸೋಮವಾರಪೇಟೆ ತಾಲೂಕಿನ ಕಲ್ಕಂದೂರಿನಲ್ಲಿ ನೋಂದಣಿ ಸಂಖ್ಯೆಯ ಆಲ್ಟೋ ಕಾರಿನಲ್ಲಿ (ಏಂ೫೦ ಒ ೬೨೩೨ ) ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಲ್ಕಂದೂರಿನ ಅದ್ರಾಮ ಮತ್ತು ನಾಲ್ವರು ಅಸ್ಸಾಂ ಕಾರ್ಮಿಕರೂ ಸೇರಿದಂತೆ ಗೋಮಾಂಸ ಸಾಗಾಟ ಮಾಡುತ್ತಿದ್ದ ೫ ಆರೋಪಿಗಳ ಸಮೇತ ಆಲ್ಟೋ ಕಾರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಗೋಹತ್ಯೆ- ಗೋಕಳ್ಳಸಾಗಾಟ- ಗೋಮಾಂಸ ಮಾರಾಟಗಳನ್ನು ತಡೆಗಟ್ಟಲು ಪೊಲೀಸರು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದಾಗಿ ಬಹುಸಂಖ್ಯಾತ ಹಿಂದೂಗಳು ಪೂಜಿಸುವ ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುತ್ತಿದೆಯೆಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.