ಸಿದ್ದಾಪುರ, ಡಿ. ೨೯: ಹಾಡಹಗಲೇ ಕಾಫಿ ತೋಟದೊಳಗೆ ಅಕ್ರಮ ಪ್ರವೇಶಿಸಿ ಕಾಫಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂದಿಸಿದ್ದಾರೆ. ಬಾಡಗ ಬಾಣಂಗಾಲ ಗ್ರಾಮದ ಎಲ್ಕ್ಹಿಲ್ ಕಾಫಿ ತೋಟದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮಧ್ಯಾಹ್ನದ ಸಮಯದಲ್ಲಿ ಕಾಫಿ ಹಣ್ಣುಗಳನ್ನು ಕೊಯ್ಲು ಮಾಡಿ ಕಳ್ಳತನ ಮಾಡುವ ಸಂದರ್ಭದಲ್ಲಿ ತೋಟದ ಸಿಬ್ಬಂದಿಗಳು ಅನುಮಾನಗೊಂಡು ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ೧೦೦ ಕೆಜಿ ಹಣ್ಣು ಕಾಫಿಗಳನ್ನು ಚೀಲದಲ್ಲಿ ತುಂಬಿಸಿದ್ದು ಸ್ಕೂಟಿ ಒಂದರಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಕಾಫಿ ತೋಟದ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಕಳ್ಳರ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಆರೋಪಿಗಳಾದ ಸಿದ್ದಾಪುರದ ಪಾಲಿಬೆಟ್ಟ ರಸ್ತೆ ನಿವಾಸಿ ಆಟೋ ಚಾಲಕ ಅನ್ಸಾರ್ (೩೪) ಹಾಗೂ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ ಶಕೀರ್ (೨೭) ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂದಿಸಲಾಗಿದೆ. ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.