ಸೋಮವಾರಪೇಟೆ, ಡಿ. ೨೯: ಕ್ಷೇತ್ರದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆಗಳ ಅಭಿವೃದ್ಧಿಗೆ ರೂ. ೮೦ ಕೋಟಿ ವಿಶೇಷ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಮೂಲಕ ರೂ. ೨೦ ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಾಜ್ಯಹೆದ್ದಾರಿ ೮೫ರ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಲೋಕೋಪಯೋಗಿ ಇಲಾಖೆ ಮೂಲಕ ಎಸ್ಹೆಚ್ಐಡಿಪಿ ಯೋಜನೆಯಡಿ ೫೦ ಕೋಟಿ ಹಾಗೂ ಅಪೆಂಡಿಕ್ಸ್-ಸಿ.ಯಲ್ಲಿ ೩೦ ಕೋಟಿ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಈ ಸಂಬAಧಿತ ಕಡತಕ್ಕೆ ಮುಖ್ಯಮಂತ್ರಿಗಳ ಸಹಿ ಬಾಕಿಯಿದೆ. ಜನವರಿ ತಿಂಗಳೊಳಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ನಂತರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ರಾಜ್ಯ ಹೆದ್ದಾರಿ ೮೫ಕ್ಕೆ ಒಳಪಡುವ ಆಲೇಕಟ್ಟೆಯಿಂದ ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗದ ರಸ್ತೆ ಕಿರಿದಾಗಿದ್ದು, ನಿರ್ವಹಣೆಯ ಕೊರತೆ ಎದುರಾಗಿತ್ತು. ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿತ್ತು. ಈ ರಸ್ತೆಯನ್ನು ಅಗಲೀಕರಣ ಮಾಡುವಂತೆ ಗ್ರಾಮಸ್ಥರು ಹಲವು ದಶಕಗಳಿಂದ ಬೇಡಿಕೆ ಇಡುತ್ತಿದ್ದರು. ಆದರೂ ಕಾಮಗಾರಿ ನಡೆದಿರಲಿಲ್ಲ. ಇದೀಗ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿದ್ದು, ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು. ಪಟ್ಟಣದಿಂದ ಕೂತಿ ಗ್ರಾಮ ಸಂಪರ್ಕದ ರಸ್ತೆಗೆ ೨೦೨೩-೨೪ರ ಸಾಲಿನ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಲಾಗಿತ್ತು. ಇದೀಗ ೨೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಚೌಡ್ಲು, ಹಾನಗಲ್ಲು, ತೋಳೂರುಶೆಟ್ಟಳ್ಳಿ ಗ್ರಾ.ಪಂ.ಗೆ ಈ ರಸ್ತೆ ಒಳಪಡುತ್ತಿದೆ. ಇದೀಗ ಇನಕನಹಳ್ಳಿವರೆಗೆ ಕಾಮಗಾರಿ ನಡೆಯುತ್ತಿದ್ದು, ಕೊಡಗು ಗಡಿಯಾದ ಎಡದಂಟೆಯವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು. ಪ್ರಸ್ತುತ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಗುಣಮಟ್ಟದಿಂದ ನಿರ್ಮಾಣವಾಗುತ್ತಿದೆ. ಇನ್ನೂ ಸೈಡ್ವಾಲ್, ಮರ ಹಾಗೂ ಕಂಬಗಳ ತೆರವು, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಬಾಕಿಯಿದೆ. ಮುಂದಿನ ಎರಡು ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಮಂತರ್ ಗೌಡ ಹೇಳಿದರು.
ರಸ್ತೆ ಅಗಲೀಕರಣಕ್ಕೆ ಸ್ಥಳೀಯರು ಜಾಗ ಬಿಟ್ಟುಕೊಟ್ಟಿದ್ದಾರೆ. ಜಾಗ ಬಿಟ್ಟಿರುವುದರಿಂದ ರಸ್ತೆಯ ಅಗಲ ಹೆಚ್ಚಾಗಿದೆ. ಈ ರಸ್ತೆ ನಿರ್ಮಾಣದಿಂದ ಅವರಿಗೇ ಹೆಚ್ಚು ಅನುಕೂಲವಾಗುತ್ತದೆ ಎಂದ ಅವರು, ೧೫ ಕೋಟಿ ಅನುದಾನದಡಿ ಯಲಕನೂರು ಹೊಸಳ್ಳಿ ರಸ್ತೆ, ಸಿಆರ್ಎಫ್ನಡಿ ರೂ. ೬ ಕೋಟಿ ವೆಚ್ಚದಲ್ಲಿ ಗೋಪಾಲಪುರ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮಳೆ ಹೆಚ್ಚಾದ ಹಿನ್ನೆಲೆ ರಸ್ತೆಗಳು ಗುಂಡಿ ಬಿದ್ದಿದ್ದವು. ಇದೀಗ ಮುಚ್ಚುವ ಕೆಲಸ ಆರಂಭವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಕೆಲವರು ರಸ್ತೆ ಕಾಮಗಾರಿ ನಡೆಯುತ್ತಿರುವುದು ಹಿಂದಿನ ಸರ್ಕಾರದ ಅನುದಾನದಿಂದ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಅನುದಾನವಾಗಿದ್ದರೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅವರೇ ಭೂಮಿಪೂಜೆ ಮಾಡಬೇಕಿತ್ತು ಎಂದು ತಿರುಗೇಟು ನೀಡಿದ ಶಾಸಕರು, ಹಿಂದಿನವರು ಶನಿವಾರಸಂತೆ ಬಸ್ ನಿಲ್ದಾಣ ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದರು. ಕ್ಷೇತ್ರದ ಜನ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ರಾಜಕೀಯ ಟೀಕೆಗಳಿಗೆ ಬೇಸರ ಇಲ್ಲ; ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತೇವೆ ಎಂದು ಮಂತರ್ ಗೌಡ ಹೇಳಿದರು.
ರಸ್ತೆ ಕಾಮಗಾರಿ ಪರಿಶೀಲನೆ ಸಂದರ್ಭ ಪ್ರಮುಖರಾದ ಬಿ.ಬಿ. ಸತೀಶ್, ಸುಜಿತ್, ಟಿ.ಈ. ಸುರೇಶ್, ಡಿ.ಯು. ಕಿರಣ್, ವಿನಿ, ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್, ಅಭಿಯಂತರ ಅರ್ಬಾಜ್ ಸೇರಿದಂತೆ ಇತರರು ಇದ್ದರು.