ಮಡಿಕೇರಿ, ಡಿ.೨೯ : ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ೨೭ ನೇ ವಾರ್ಷಿಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಅಂಬೇಕಲ್ ಜೀವನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕೂಟುಹೊಳೆಯಲ್ಲಿರುವ ಆಹನ್ ಹಿಲ್ಸ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸದಸ್ಯರು ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಮಾತನಾಡಿ, ಔಷಧ ನಿಯಂತ್ರಣ ಇಲಾಖೆ ಸಾರ್ವಜನಿಕ ಹಿತದೃಷ್ಟಿಯಿಂದ ಹೊರ ತರುತ್ತಿರುವ ಹೊಸ ಕಾನೂನುಗಳ ಬಗ್ಗೆ ಸೂಕ್ತರೀತಿಯಲ್ಲಿ ಅರಿತುಕೊಳ್ಳುವುದರ ಮೂಲಕ ಕಾನೂನು ಪಾಲನೆ ಅತ್ಯಗತ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಔಷಧಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಅಲ್ಲಲ್ಲಿ ವರದಿಗಳು ಬರುತ್ತಿದ್ದು ಆ ಬಗ್ಗೆ ಜನಜಾಗೃತಿ ಮತ್ತು ನಾರ್ಕೋಟಿಕ್ (ಅಮಲು ಭರಿಸುವ ಔಷಧಗಳು) ಔಷಧಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಔಷಧಿ ವ್ಯಾಪಾರಸ್ಥರು ಮುಂದಾಗಬೇಕು. ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಔಷಧ ವ್ಯಾಪಾರಿಗಳ ಬಗ್ಗೆ ನಂಬಿಕೆ ಹೆಚ್ಚಿಸುವಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ನಕಲಿ ಔಷಧಗಳ ಹಾವಳಿಯನ್ನು ತಪ್ಪಿಸಲು ಈಗಾಗಲೇ ಔಷಧ ನಿಯಂತ್ರಣ ಇಲಾಖೆಯಿಂದ ಕಿಖ ಕೋಡ್ ವ್ಯವಸ್ಧೆ ಜಾರಿಯಾಗಿದ್ದು, ಅದನ್ನು ಪ್ರತಿಯೊಬ್ಬ ಔಷಧ ವ್ಯಾಪಾರಿ ಅಳವಡಿಸಿಕೊಂಡು ಪಾರದರ್ಶಕತೆಯೊಂದಿಗೆ ವ್ಯಾಪಾರ ಮಾಡುವ ಅಗತ್ಯವಿದೆ ಎಂದು ಅವರು ಕರೆಕೊಟ್ಟರು.
ಜನವರಿಯಲ್ಲಿ ಭವನ ಉದ್ಘಾಟನೆ
ಜಿಲ್ಲಾ ಸಂಘದ ಹಲವಾರು ವರ್ಷಗಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಉದ್ದೇಶಿತ ಫಾರ್ಮ ಭವನ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಭವನದ ಉದ್ಘಾಟನೆ ಜನವರಿಯಲ್ಲಿ ನಡೆಯಲಿದೆ ಎಂದು ಜೀವನ್ ಸಭೆಗೆ ತಿಳಿಸಿದರು.
ಸಂಘದ ಕಾರ್ಯದರ್ಶಿ ಪುರುಷೋತ್ತಮ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪ್ರಸಾದ್ಗೌಡ ಲೆಕ್ಕ ಪರಿಶೋಧಕರ ವರದಿಯನ್ನು ಮಂಡಿಸಿದರು. ಜಂಟಿ ಕಾರ್ಯದರ್ಶಿ ವಸಂತ್ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಔಷಧಿ ವ್ಯಾಪಾರಸ್ಥರ ಸಂಘದಿAದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.