ಮಡಿಕೇರಿ, ಡಿ. ೩೦: ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ವಾರ್ಷಿಕವಾಗಿ ನೀಡಲಾಗುವ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿಯನ್ನು ಮಡಿಕೇರಿಯ ಪತ್ರಕರ್ತ ಅನಿಲ್ ಎಚ್.ಟಿ. ಅವರಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪತ್ರಿಕೋದ್ಯಮ, ಕೃಷಿ, ಸಾಹಿತ್ಯ, ಸಂಗೀತ, ವೈದ್ಯಕೀಯ, ಸಮಾಜಸೇವೆ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಕೊಡಗು ಜಿಲ್ಲೆಯಿಂದ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಅನಿಲ್ ಎಚ್.ಟಿ ಅವರಿಗೆ ಗಾಂಧಿ ಪ್ರಿಯ ಹೆಸರಿನ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿಜಯ್ ಸಮರ್ಥ ಮಾತನಾಡಿ, ದೇಶದ ಮಹಾತ್ಮನ ಹೆಸರಿನಲ್ಲಿ ಸಾಮಾಜಿಕ ಸೇವಾ ಸಂಘಟನೆಗಳು ಮೀಸಲಾಗಿಟ್ಟಿರುವ ಪ್ರಶಸ್ತಿಗಳೇ ಕಡಮೆಯಾಗಿದೆ. ಗಾಂಧೀಜಿ ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದಷ್ಟೇ ಅಲ್ಲ ಪತ್ರಿಕೋದ್ಯಮ, ಸಮಾಜಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದವರು. ಹೀಗಾಗಿ ಗಾಂಧೀಜಿ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಪ್ರಶಸ್ತಿ ಎಂಬುದು ಸಾಧಕರಿಗೆ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗುತ್ತದೆ ಎಂದೂ ವಿಜಯ್ ಸಮರ್ಥ ಅಭಿಪ್ರಾಯಪಟ್ಟರು. ಬೆಂಗಳೂರು ಶ್ರೀ ತ್ಯಾಗರಾಜ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ, ಸಮಾಜಸೇವಕ ಮಾನಂದಿ ರಮೇಶ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿದ್ದರು.