ಸೋಮವಾರಪೇಟೆ, ಡಿ. ೩೦: ಹೊಸ ವರ್ಷಾಚರಣೆ ಹಿನ್ನೆಲೆ ಹೋಂ ಸ್ಟೇ, ರೆಸಾರ್ಟ್ಗಳಿಗೆ ಬರುವ ಪ್ರವಾಸಿಗರ ಬಗ್ಗೆ ಮಾಲೀಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ಮೋಜು ಮಸ್ತಿಯ ಹೆಸರಿನಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಸೂಚನೆ ನೀಡಿದರು.
ಠಾಣೆಯಲ್ಲಿ ಆಯೋಜಿಸಿದ್ದ ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಹೊರಭಾಗದಿಂದ ಆಗಮಿಸುವ ಪ್ರವಾಸಿಗರ ಬಗ್ಗೆ ಜಾಗ್ರತೆ ವಹಿಸಬೇಕು. ಅವರುಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಹೊಸ ವರ್ಷಾಚರಣೆ ನೆಪದಲ್ಲಿ ಜಗಳ-ಕಲಹಗಳಿಗೆ ಆಸ್ಪದ ನೀಡಬಾರದು ಎಂದು ಮುದ್ದು ಮಹದೇವ ಹೇಳಿದರು. ತಮ್ಮ ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಾನೂನು ಪಾಲನೆಯೊಂದಿಗೆ ವರ್ಷಾಚರಣೆ ಮಾಡಬೇಕು. ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಯಾವುದೇ ಅನುಮಾನ-ಗೊಂದಲಗಳಿದ್ದರೆ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದ ಅವರು, ರೇವ್ ಪಾರ್ಟಿ, ಮಾದಕ ವಸ್ತುಗಳ ಬಳಕೆ ಕಂಡುಬAದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.