ಗೋಣಿಕೊಪ್ಪಲು: ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ತಿತಿಮತಿಯ ಲ್ಯಾಂಪ್ಸ್ ಅಕಾಡೆಮಿ ಶಾಲೆಯ ಬೆಳ್ಳಿಹಬ್ಬ ಸಂಭ್ರಮದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಮಾತನಾಡಿದ ಇವರು, ಖಾಸಗಿ ವಿದ್ಯಾಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಭವಿಷ್ಯದ ರಕ್ಷಣೆಗೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುವುದು ಸುಲಭದ ಮಾತಲ್ಲ. ಕಠಿಣ ಪರಿಶ್ರಮದ ಫಲವಾಗಿ ಇಂದು ಸಂಸ್ಥೆಯು ೨೫ ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸುವ ಮೂಲಕ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಶಿಕ್ಷಣ ನೀಡುವ ಕೆಲಸ ಪವಿತ್ರವಾಗಿದೆ. ಆ ನಿಟ್ಟಿನಲ್ಲಿ ಲ್ಯಾಂಪ್ಸ್ ಆಕಾಡೆಮಿ ಸಾಧನೆ ಮಾಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದಲ್ಲದೆ, ಹತ್ತಾರು ಮಂದಿಗೆ ಸಂಸ್ಥೆಯಲ್ಲಿ ಉದ್ಯೋಗ ನೀಡಿರುವುದು ಶ್ಲಾಘನೀಯ ಎಂದರು. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಸೂಸುವ ಮೂಲಕ ಸಾಧನೆ ಮಾಡಬೇಕು. ಶಾಲಾ ಹಂತದಲ್ಲಿಯೇ ತಮ್ಮ ಪ್ರತಿಭೆ ಗುರುತಿಸುವಿಕೆಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳ್ಳಿಮಹೋತ್ಸವದ ಅಧ್ಯಕ್ಷತೆ ಯನ್ನು ಸಂಸ್ಥೆಯ ಅಧ್ಯಕ್ಷ ಪಿ.ವಿ.ಶಬರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಗಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಡಿಡಿಪಿಐ ಬಸವರಾಜ್, ರಾಷ್ಟç ಪ್ರಶಸ್ತಿ ವಿಜೇತೆ ರಸಿಕ ಈರಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಮನುನಂಜಪ್ಪ, ಸಂತೋಷ್, ಪ್ರಭಾಕರ್, ಎಂ.ಆರ್. ವಿಕ್ರಂ, ಮುಖ್ಯೋಪಾಧ್ಯಾಯರಾದ ಅಪಲೋನ್ಯ ಡಿಸೋಜ ಪಾಲ್ಗೊಂಡಿದ್ದರು.
ಶಾಲೆಯಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿದ ಶಾಲಾ ಶಿಕ್ಷಕರನ್ನು, ಆಡಳಿತ ಮಂಡಳಿಯ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಎಂ.ಆರ್. ಸುಮಂತ್ ಸ್ವಾಗತಿಸಿ ವಂದಿಸಿದರು.