ಪೊನ್ನಂಪೇಟೆ, ಜ. ೧: ಕೃಷಿ ಕಾಯಕವನ್ನೇ ನಂಬಿಕೊAಡು ಜೀವನ ನಡೆಸುತ್ತಿರುವ ಒಕ್ಕಲಿಗ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಪರಸ್ಪರ ಒಗ್ಗಟ್ಟಿನ ಅಗತ್ಯವಿದೆ. ಇದರಿಂದ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸಲು ಮತ್ತು ಸಮುದಾಯವನ್ನು ಒಟ್ಟಾಗಿ ನಿಲ್ಲುವಂತೆ ಮಾಡಲು ಖಂಡಿತ ಸಾಧ್ಯವಿದೆ ಎಂದು ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಆರ್. ಸುರೇಶ್ ಹೇಳಿದರು.

ದಕ್ಷಿಣ ಕೊಡಗಿನ ಕೋತೂರು ಗ್ರಾಮದ ಮಲೆ ಮಹದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯ ಬಾಂಧವರ ಒಗ್ಗಟ್ಟು ವಿಶೇಷವಾಗಿ ದುರ್ಬಲರಿಗೆ ಸಹಾಯ ಮಾಡಲು, ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಲು ಮತ್ತು ಸಮುದಾಯದ ಅಭಿವೃದ್ಧಿಗೆ ಸಹಭಾಗಿತ್ವದ ಚಟುವಟಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಬಹುಮುಖ್ಯವಾಗಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚು ನೆರವಾಗುತ್ತದೆ. ಜೊತೆಗೆ ಬಹಳಷ್ಟು ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಸ್ಥಳೀಯವಾಗಿ ಸಮುದಾಯದ ಸಾಮಾಜಿಕ ಪ್ರಗತಿಗಾಗಿ ಸಾಕಷ್ಟು ಶ್ರಮವಹಿಸುತ್ತಿದೆ. ಈಗಾಗಲೇ ಸಂಘದ ವತಿಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೋತೂರಿನಲ್ಲಿ ನಿವೇಶನವನ್ನು ಖರೀದಿಸಲಾಗಿದೆ. ಈ ಸ್ಥಳದಲ್ಲಿ ಉದ್ದೇಶಿತ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಮತ್ತು ಸಮುದಾಯ ಭವನ ನಿರ್ಮಾಣ ಯೋಜನೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಮತ್ತು ದಾನಿಗಳಿಂದ ಪಡೆಯುವ ಪ್ರಕ್ರಿಯೆಗಳನ್ನು ಮುಂದಿನ ತಿಂಗಳಿನಿAದ ಆರಂಭಿಸಲಾಗುವುದು ಎಂದು ಸುರೇಶ್ ಮಹಾಸಭೆಗೆ ಮಾಹಿತಿ ನೀಡಿದರು. ಇದಕ್ಕೂ ಮೊದಲು ಮಹಾಸಭೆಯನ್ನು ಸಂಘದ ಹಿರಿಯ ಸದಸ್ಯರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಂಘದ ಗೌರವ ಕಾರ್ಯದರ್ಶಿ ವಿ.ವೈ. ಗಣೇಶ್ ಆಡಳಿತ ಮಂಡಳಿ ವರದಿಯನ್ನು ಮಹಾಸಭೆಗೆ ಮಂಡಿಸಿದರು. ಸಂಘದ ನಿರ್ದೇಶಕರಾದ ವಿ.ಎಸ್. ಬಸವರಾಜು, ವಿ.ವಿ. ಉಲ್ಲಾಸ್, ಕೆ.ಕೆ. ಮಂಜುನಾಥ್, ವಿ.ಆರ್. ಸತೀಶ್, ವಿ.ಟಿ. ತಮ್ಮಯ್ಯ, ವಿ.ಆರ್. ಗೌರಮ್ಮ, ವಿ.ಆರ್. ಸರಸ್ವತಿ ಮೊದಲಾದವರು ವೇದಿಕೆಯಲ್ಲಿದ್ದರು. ವಿ.ಯು. ಜೈಯಿಶ್ ಪ್ರಾರ್ಥಿಸಿದರು. ನಿರ್ದೇಶಕ ವಿ.ಆರ್. ಪರಮೇಶ್ ಸ್ವಾಗತಿಸಿದರು. ಗಣೇಶ್ ವಂದಿಸಿದರು